ನವಲಗುಂದ: ಕೊರೊನಾ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಾಗಿ ನಗರದ ವರ್ತಕರ ಸಂಘದ ಸದಸ್ಯರು ನಿರ್ಧರಿಸಿದ್ದಾರೆ.
ನಗರದ ವರ್ತಕರ ಸಂಘದ ಸರ್ವಸದಸ್ಯರ ಸಾಧಾರಣ ಸಭೆಯಲ್ಲಿ, ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೋಂಕಿನ ಬಗ್ಗೆ ಚರ್ಚಿಸಲಾಯಿತು. ಬಳಿಕ ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ಎಲ್ಲಾ ಮುಂಜಾಗ್ರತಾ ಕ್ರಮಕ್ಕೆ ಪೂರ್ಣ ಸಹಕಾರ ನೀಡಲು ವರ್ತಕರ ಸಂಘದ ಸದಸ್ಯರು ಸರ್ವಾನುಮತದಿಂದ ತೀರ್ಮಾನಿಸಿದರು. ಸಾಮಾಜಿಕ ಅಂತರ ನಿಯಮ ಪಾಲಿಸಿ ಮಾಸ್ಕ್ ಧರಿಸಿ ಬಂದ ಗ್ರಾಹಕರೊಂದಿಗೆ ಸ್ಯಾನಿಟೈಸರ್ ಬಳಸಿದ ನಂತರವೇ ವ್ಯವಹಾರ ಮಾಡಲಾಗುವುದು. ನಾಳೆಯಿಂದ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಅಂಗಡಿ ತೆರೆಯಲು ತೀರ್ಮಾನಿಸಲಾಯಿತು.
ಸೋಂಕು ತಡೆಯುವಲ್ಲಿ ತಾಲೂಕು ಆಡಳಿತ ನಡೆಸುವ ಎಲ್ಲಾ ಕ್ರಮಗಳಿಗೆ ವರ್ತಕರ ಸಂಘದ ಪರವಾಗಿ ಸಂಪೂರ್ಣ ಬೆಂಬಲ, ಸಹಕಾರ ನೀಡಲು ತೀರ್ಮಾನಿಸಿ ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡುವ ಪತ್ರವನ್ನು ತಹಶೀಲ್ದಾರ್ ನವೀನ್ ಹುಲ್ಲೂರ್ ಅವರಿಗೆ ನೀಡಿದರು.