ಹುಬ್ಬಳ್ಳಿ: ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ಸುಮಾರು 600 ಕಿ.ಮೀ. ಬೈಕ್ ಮತ್ತು ಬಸ್ಗಳ ಮೂಲಕ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ್ಯಾಲಿಯು ಇಂದು ಚಾಣಿಜ್ಯ ನಗರಿಯನ್ನು ತಲುಪಿದ್ದು, ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಲಾಯಿತು.
ಫೆ.15 ರಂದು ಬೆಳಗಾವಿಯಲ್ಲಿ ಚಾಲನೆ ಪಡೆದ ಈ ರ್ಯಾಲಿಯು ಹುಬ್ಬಳ್ಳಿ ತಲುಪಿದ್ದು, ಚೆನ್ನಮ್ಮ ವೃತ್ತದಲ್ಲಿ ಬೃಹತ್ ರ್ಯಾಲಿ ನಡೆಸಿದ ಅವರು ಮಹದಾಯಿ ಯೋಜನೆ ತಕ್ಷಣದಲ್ಲೇ ಜಾರಿಯಾಗಬೇಕು, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿಡಬೇಕು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು, ಕರ್ನಾಟಕದಲ್ಲಿ ಕನ್ನಡಿಗರಿಗೆ 80% ರಷ್ಟು ಉದ್ಯೋಗವಕಾಶ ನೀಡಬೇಕು, ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೂಢ ಅವರ ಹೆಸರಿಡಬೇಕು, ಹಾಗೂ ಔರಾದ್ಕರ್ ವರದಿಯನ್ನು ಜಾರಿಗೊಳಿಸಬೇಕು ಎಂಬ ಸುಮಾರು 17 ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಪಡಿಸಿದರು.
ಇನ್ನು, ರ್ಯಾಲಿಯೂ ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ. ಇನ್ನು ಹುಬ್ಬಳ್ಳಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಆದಷ್ಟು ಉತ್ತರ ಕರ್ನಾಟಕದ ಸಮಸ್ಯೆಯ ಹೋರಾಟಕ್ಕೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.