ಹುಬ್ಬಳ್ಳಿ: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಹ ಸಾರ್ವಜನಿಕರು ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಹಾಗಾಗಿ, ಅಂತವರಿಗೆ ಬಿಸಿ ಮುಟ್ಟಿಸಲು ಮಹಾನಗರ ಪಾಲಿಕೆ ಸಿಬ್ಬಂದಿ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 ರ ಕಲಂ 431 ರ ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಅವಳಿ ನಗರದಲ್ಲಿ ಮಾಸ್ಕ್ ಧರಿಸದೆ ತಿರುಗುವವರಿಗೆ ವಿವಿಧ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಇಂದು ಮಾಸ್ಕ್‌ರಹಿತರಿಂದ ಒಟ್ಟು 29,900 ರೂ. ವಸೂಲಿ ಮಾಡಲಾಗಿದೆ.
ಇದುವರೆಗೆ ವಿವಿಧ ನಿಯಮಗಳ ಉಲ್ಲಂಘನೆಗೆ ಒಟ್ಟು 3,77,800 ರೂ.ಗಳ ದಂಡ ವಿಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.