ಹುಬ್ಬಳ್ಳಿ: ಮಾನಸಪುತ್ರನಿಗಾಗಿ ಬಿ.ಎಲ್.ಸಂತೋಷ್ ತಮಗೆ ಟಿಕೆಟ್ ತಪ್ಪಿಸಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಮಹೇಶ್ ನಾನು ಮಾನಸಪುತ್ರ ಅಂತ ನನಗೆ ಟಿಕೆಟ್ ನೀಡಿಲ್ಲ. ಬದಲಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎಂದು ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವತ್ತು ಅವರು ಉಪನಾಮಕರಣ ಮಾಡಿದ್ದಾರೆ. ಆದರೆ ನನಗೆ 30 ವರ್ಷದಿಂದ ಜಗದೀಶ್ ಶಿಷ್ಯ ಮಹೇಶ್ ಟೆಂಗಿನಕಾಯಿ ಎಂದೇ ಇದೆ. ಇವತ್ತು ಗುರು ಶಿಷ್ಯರ ನಡುವೇ ಒಂದು ನಡೆಯುತ್ತಿದೆ. ಗುರುಗಳು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ತಮ್ಮ ಪಕ್ಷದ ಕುರಿತು ಮಾತನಾಡಿ, ನಮ್ಮ ಪಕ್ಷದಲ್ಲಿ ವ್ಯಕ್ತಿ ನಿಷ್ಠೆ ಇಲ್ಲ, ನಮ್ಮಲ್ಲಿ ಮೊದಲ ಆದ್ಯತೆ ಪಕ್ಷ ನಿಷ್ಟೆಗೆ ಎಂದರು. ಅಲ್ಲದೇ ಇಲ್ಲಿ ಏಕ ವ್ಯಕ್ತಿ ನಿರ್ಣಯ ಇಲ್ಲ, ಬಿ.ಎಲ್.ಸಂತೋಷ್ ಒಬ್ಬರಿಂದಲೇ ಎಲ್ಲ ನಿರ್ಧಾರಗಳೂ ಆಗುವುದಿಲ್ಲ. ಸಂಸದೀಯ ಮಂಡಳಿಯಲ್ಲಿ ಟಿಕೆಟ್ ತೀರ್ಮಾನ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಸದೀಯ ಮಂಡಳಿಯಲ್ಲಿ ತೀರ್ಮಾನ: ನೀಡಿರುವ ಟಿಕೆಟ್ ಆಯ್ಕೆ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡಲಾಗಿದೆ. ನಾನು ಶೆಟ್ಟರ್ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಅಲ್ಲದೇ ಅವರು ನಮ್ಮ ರಾಜಕೀಯ ಗುರು. ನನಗೆ ಟಿಕೆಟ್ ನೀಡಿರುವುದು ಮಹೇಶ ಟೆಂಗಿನಕಾಯಿಗಾಗಿ ಮಾತ್ರ ನಿರ್ಧಾರ ತೆಗೆದುಕೊಂಡಿರುವುದಿಲ್ಲ. ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಲು ಟಿಕೆಟ್ ನೀಡಿದ್ದಾರೆ ವಿನಃ ಯಾವುದೇ ಷಡ್ಯಂತ್ರವಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಇನ್ನು, ಸ್ಕ್ರೀನಿಂಗ್ ಕಮಿಟಿ ಅಥವಾ ಕೋರ್ ಕಮಿಟಿಯಲ್ಲಿ ನಾನು ಇರಲಿಲ್ಲ, ನಮ್ಮ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ದುಡಿದಿದ್ದರಿಂದ ಟಿಕೆಟ್ ನೀಡಿದ್ದಾರೆ. ಬಿ.ಎಲ್.ಸಂತೋಷ್ ಅವರು ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಅವರು ಎಂದೂ ಅಧಿಕಾರದ ಬೆನ್ನ ಹಿಂದೆ ಹೋದವರಲ್ಲ. ಹಾಗೆ ಜಗದೀಶ್ ಶೆಟ್ಟರ್ ನನ್ನ ಗುರುಗಳು, ನಾನು ಗುರುವಿನ ವಿರುದ್ಧವೇ ಸೆಡ್ಡು ಹೊಡೆದಿದ್ದೇನೆ. ಗುರುವಿನ ಆಶೀರ್ವಾದದಿಂದ ಗೆದ್ದು ಬರುತ್ತೇನೆ ಎಂದೂ ಮಹೇಶ್ ಟೆಂಗಿನ ಕಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಜೆ.ಪಿ ನಡ್ಡಾ ಆಗಮನದ ಬಗ್ಗೆ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ಡ್ಯಾಮೇಜ್ ಕ್ಲಿಯರ್ ಮಾಡಲು ಬರುತ್ತಿಲ್ಲ. ಅಭ್ಯರ್ಥಿಗಳ ಪ್ರಚಾರಕ್ಕೆ ಹಾಗೂ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬರುತ್ತಿದ್ದಾರೆ. ಶೆಟ್ಟರ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಬರಬಹುದು ಎಂದರು.
ಶೆಟ್ಟರ್ ಹೇಳಿಕೆ ಏನು?: ಟಿಕೆಟ್ ನಿರಾಕರಣೆಯಿಂದ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ನನಗೆ ಸೆಂಟ್ರಲ್ ಕ್ಷೇತ್ರದ ಟಿಕೆಟ್ ತಪ್ಪಲು ಮೂಲ ಕಾರಣ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್. ತಮ್ಮ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ಕೊಡಿಸಲು ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಈ ಹೇಳಿಕೆಗೆ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 'ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ.. ಮಾನಸ ಪುತ್ರನ ಮೇಲಿನ ಪ್ರೇಮಕ್ಕೆ ನನ್ನ ಬಲಿ ಕೊಟ್ಟರು'.