ಹುಬ್ಬಳ್ಳಿ: ಬೇಸಿಗೆ ಬಂತು ಎಂದರೆ ನೀರಿನ ಅಭಾವ ಒಂದು ಸಮಸ್ಯೆಯಾದರೆ ಅಗ್ನಿ ದುರಂತಗಳು ಕೂಡ ಹೆಚ್ಚಾಗಿ ಕಾಡುವ ಸಮಸ್ಯೆ. ಇದರ ನಿಯಂತ್ರಣ ಒಂದು ದೊಡ್ಡ ಸವಾಲೇ ಸರಿ. ಬೇಸಿಗೆ ವೇಳೆ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ. ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಗ್ನಿ ದುರಂತಗಳು ಸಂಭವಿಸಿವೆ. ಬೇಸಿಗೆಯ ಉಷ್ಣತೆ ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಮತ್ತು ಹಳ್ಳಿಗಳಲ್ಲಿ ಬೆಂಕಿ ಅಪಘಾತಗಳು ಹೆಚ್ಚಾಗಿ ನಡೆದಿವೆ.
ಇನ್ನೂ ಜನರ ನಿಷ್ಕಾಳಜಿಯಿಂದಲೂ ಇಂತಹ ಅನಾಹುತಗಳು ನಡೆಯುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಹೊಲದಲ್ಲಿ ತ್ಯಾಜ್ಯ ಸುಡಲು ಹಚ್ಚಿರುವ ಬೆಂಕಿಯಿಂದ ಸಾಕಷ್ಟು ಅನಾಹುತಗಳು ಸಂಭವಿಸುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಇನ್ನೂ ಇಂತಹ ಅಗ್ನಿ ಅವಘಡಗಳಿಂದ ಜೀವಹಾನಿ ತಪ್ಪಿಸಲು, ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಸಂರಕ್ಷಣೆ ಮಾಡಲು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ಸಾಕಷ್ಟು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿವೆ. ಮುಂಬರುವ ಸಮಸ್ಯೆಗಳಿಗೆ ಪೂರಕವಾಗಿ ಸಿದ್ಧತೆ ನಡೆಸಿಕೊಂಡಿದೆ.
ಈಗಾಗಲೇ ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ 45, ಕುಂದಗೋಳ ತಾಲೂಕಿನಲ್ಲಿ 25, ಹುಬ್ಬಳ್ಳಿ ನಗರದಲ್ಲಿ 44, ಕಲಘಟಗಿ ತಾಲೂಕಿನಲ್ಲಿ 23, ಧಾರವಾಡ ತಾಲೂಕಿನಲ್ಲಿ 61, ಅಳ್ನಾವರ ತಾಲೂಕಿನಲ್ಲಿ ಸಂಭವಿಸಿದ್ದ ಸುಮಾರು 10 ಅಗ್ನಿ ಅವಘಡಗಳನ್ನು ನಂದಿಸುವ ಕಾರ್ಯವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಮಾಡಿದ್ದಾರೆ. ಅಲ್ಲದೇ ಬಾಲಕರು ನಿಷ್ಕಾಳಜಿಯಿಂದ ಕೆರೆಯಲ್ಲಿ ಈಜಲು ಹೋಗಿ ಅಪಘಾತಕ್ಕೆ ತುತ್ತಾಗುವ ಸಾಕಷ್ಟು ಪ್ರಕರಣಗಳು ಕೂಡ ನಡೆಯುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಅವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಪ್ರಕರಣಗಳೇ ಹೆಚ್ಚು: ಸ್ಫೋಟದ ಕೇಸ್ಗಳು ಇಳಿಕೆ
ಇನ್ನು ಹುಬ್ಬಳ್ಳಿ- ಧಾರವಾಡದಂತಹ ಮಹಾನಗರದಲ್ಲಿ ಶಾಟ್ ಸರ್ಕ್ಯೂಟ್ ಸಮಸ್ಯೆ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಒಂದು ಕ್ಷಣದ ಎಚ್ಚರಿಕೆ ಎಲ್ಲರ ಭವಿಷ್ಯ ಭದ್ರಪಡಿಸುತ್ತದೆ.
ಒಟ್ಟಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಂಭವಿಸುವ ಅಗ್ನಿ ಆವಘಡಗಳನ್ನು ತಡೆಗಟ್ಟುವಲ್ಲಿ ಹಾಗೂ ಪ್ರಕೃತಿ ವಿಕೋಪಗಳಿಂದ ಅಪಾಯಕ್ಕೆ ಸಿಲುಕಿದವರ ರಕ್ಷಣೆ ಕಾರ್ಯದಲ್ಲಿ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಕಾರ್ಯ ಶ್ಲಾಘನೀಯವಾಗಿದೆ.