ಧಾರವಾಡ: ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್ಡೌನ್ಗೆ ರಾಜ್ಯ ಸರ್ಕಾರ ಕೆಲವು ಸಡಿಲಿಕೆಗಳನ್ನು ಪ್ರಕಟಿಸಿದ್ದು, ಕಂಟೈನ್ಮೆಂಟ್ ಪ್ರದೇಶಗಳು ಹಾಗೂ ಮಹಾನಗರಪಾಲಿಕೆ ವ್ಯಾಪ್ತಿ ಹೊರತುಪಡಿಸಿ ಉಳಿದೆಡೆ ಈ ವಿನಾಯಿತಿಗಳು ಅನ್ವಯಿಸಲಿವೆ.
ಕೃಷಿ, ಪಶು ಸಂಗೋಪನೆ ಮತ್ತು ತೋಟಗಾರಿಕೆ ಕ್ಷೇತ್ರಗಳಿಗೆ ವಿನಾಯಿತಿ:
ಎಪಿಎಂಸಿ ಮಂಡಿಗಳ ಚಟುವಟಿಕೆಗಳಿಗೆ ಅವಕಾಶ. ಕೃಷಿ ಸಂಬಂಧಿತ ಯಂತ್ರಗಳ ಮಾರಾಟ, ರಿಪೇರಿ ಕೇಂದ್ರಗಳು ಕಾರ್ಯ ನಿರ್ವಹಿಸಬಹುದು. ಕೀಟನಾಶಕಗಳು, ರಸಗೊಬ್ಬರಗಳು, ಬೀಜಗಳ ತಯಾರಿಕೆ ಹಾಗೂ ಮಾರಾಟಕ್ಕೆ ಅವಕಾಶ. ಟೀ, ಕಾಫಿ ಮತ್ತು ರಬ್ಬರ್ ಎಸ್ಟೇಟ್‌ಗಳಲ್ಲಿ ಶೇ. 50ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲು ಅವಕಾಶ ಹಾಗೂ ಈ ಉತ್ಪನ್ನಗಳ ಸಂಸ್ಕರಣೆ, ಪ್ಯಾಕೇಜಿಂಗ್, ಸಾಗಣಿಕೆ ಹಾಗೂ ಮಾರಾಟಕ್ಕೆ ಅವಕಾಶ. ಹಾಲು ಉತ್ಪಾದನಾ ಘಟಕಗಳಿಂದ ಹಾಲು ಸಂಗ್ರಹಣೆ, ಸಂಸ್ಕರಣೆ ಹಾಗೂ ಸಾಗಣಿಕೆಗೆ ಅವಕಾಶ. ಕೋಳಿ ಫಾರ್ಮ್ಗಳು ಸೇರಿದಂತೆ ಇತರೆ ಸಾಕಣೆ ಕೇಂದ್ರಗಳು ಕಾರ್ಯ ನಿರ್ವಹಿಸಲು ಅನುಮತಿ, ಪಶುಗಳಿಗೆ ಮೇವು ಆಹಾರಗಳನ್ನು ತಯಾರಿಸಿ ಮಾರಾಟ ಮತ್ತು ಸಾಗಣಿಕೆಗೆ ಅವಕಾಶ, ಗೋ ಶಾಲೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ.
ಹಣಕಾಸು ಕ್ಷೇತ್ರ, ವಾಣಿಜ್ಯ ಉದ್ದಿಮೆಗಳಿಗೆ ನೀಡಲಾದ ವಿನಾಯಿತಿಗಳು
ಆರ್‌ಬಿಐ ನಿಯಂತ್ರಣದ ಹಣಕಾಸು ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸಬಹುದು. ಬ್ಯಾಂಕ್ ಶಾಖೆಗಳು ಸಾಮಾನ್ಯ ಕೆಲಸದ ಅವಧಿಯಲ್ಲಿ ಕಾರ್ಯ ನಿರ್ವಹಿಸಬಹುದು. ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸ್ಥಳೀಯಾಡಳಿತಗಳು ರಕ್ಷಣೆ ನೀಡಬೇಕು. ಸೆಬಿ, ಐಆರ್‌ಡಿಎಐ ಮತ್ತು ವಿಮಾ ಕಂಪನಿಗಳ ಚಟುವಟಿಕೆಗಳು ಇರುತ್ತವೆ. ಎಟಿಎಂಗಳಿಗೆ ಹಣ ತುಂಬಿಸುವ ಏಜೆನ್ಸಿಗಳು ಕಾರ್ಯನಿರ್ವಹಿಸಬಹುದು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಡಿಟಿಹೆಚ್ ಸೇವೆಗೆ ಅವಕಾಶ. ಸರ್ಕಾರದ ಚಟುವಟಿಕೆಗಳಿಗೆ ಡೆಟಾ ಮತ್ತು ಕಾಲ್ ಸೆಂಟರ್‌ಗಳಿಗೆ ಅವಕಾಶ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ಕಾರದ ಮಾನ್ಯತೆಯ ಸಾಮಾನ್ಯ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸಬಹುದು. ಕೊರಿಯರ್ ಸೇವೆಗಳು, ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಇರಲಿವೆ.
ಸೀಮಿತ ಸಿಬ್ಬಂದಿ ಬಳಸಿ ಕಾರ್ಯ ನಿರ್ವಹಿಸಬಹುದಾದ ಕ್ಷೇತ್ರಗಳು
ಆಸ್ಪತ್ರೆ, ಮೆಡಿಕಲ್ ಸ್ಟೋರ್, ಕ್ಲಿನಿಕ್, ಲ್ಯಾಬ್, ಸಿಮೆಂಟ್, ಕಬ್ಬಿಣ, ಹಾರ್ಡ್ ವೇರ್ ಅಂಗಡಿಗಳು, ಪಶು ಆಸ್ಪತ್ರೆ - ಸರ್ಕಾರಿ ಮತ್ತು ಎನ್‌ಜಿಒ, ಕೇಬಲ್, ಡಿಟಿಹೆಚ್, ಟೆಲಿಕಾಂ ಸರ್ವಿಸ್, ಹಾಲಿನ ಡೇರಿ, ಹಾಲಿನ ಮಾರಾಟ ಕೇಂದ್ರ, ರಿಯಲ್ ಎಸ್ಟೇಟ್ ಕಂಪನಿ, ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗಳು, ಮೀನು ಮಾರಾಟ ಮಳಿಗೆ, ಕೃಷಿ ಚಟುವಟಿಕೆ ಪೂರಕವಾದ ಮಳಿಗೆ, ಅಗತ್ಯ ವಸ್ತುಗಳ ವಾಹನ, ತುರ್ತು ಸೇವೆಗಳು.
ಈ ಸೇವೆಗಳಿಗೆ ನಿರ್ಬಂಧ ಮುಂದುವರಿಕೆ
ಎಲ್ಲಾ ದೇಶಿ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆ, ಪ್ರಯಾಣಿಕ ರೈಲುಗಳು, ಬಸ್ ಸೇವೆ, ಮೆಟ್ರೋ ರೈಲುಗಳು ಸಂಚರಿಸುವಂತಿಲ್ಲ, ಅಂತಾರಾಜ್ಯ ಮತ್ತು ಅಂತರ ಜಿಲ್ಲಾ ಪ್ರಯಾಣಕ್ಕೆ ಅವಕಾಶವಿಲ್ಲ (ತುರ್ತು ಸಂದರ್ಭ ಹೊರತುಪಡಿಸಿ) ಯಾವುದೇ ರೀತಿಯ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತಿಲ್ಲ. ಟ್ಯಾಕ್ಸಿ (ಆಟೊ ಮತ್ತು ಸೈಕಲ್ ರಿಕ್ಷಾ ಸೇರಿದಂತೆ) ಗಳಿಗೆ ನಿಷೇಧ ಇರಲಿದೆ. ಎಲ್ಲಾ ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್, ಮನರಂಜನಾ ಕ್ಲಬ್, ಈಜುಕೊಳ, ಕ್ರೀಡಾ ಸಂಕೀರ್ಣ, ಉದ್ಯಾನ, ಬಾರ್, ಸಭಾಂಗಣಗಳನ್ನು ತೆರೆಯುವಂತಿಲ್ಲ. ಎಲ್ಲ ಧಾರ್ಮಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳು ನಿಷೇಧ. ಅಂತ್ಯ ಸಂಸ್ಕಾರದಲ್ಲಿ 20 ಜನರಿಗಿಂತ ಹೆಚ್ಚು ಮಂದಿ ಭಾಗಿಯಾಗುವಂತಿಲ್ಲ.