ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರ ಪರಿಣಾಮ ಮನೆಯಲ್ಲಿಯೇ ಉಳಿದಿರುವ ಎಷ್ಟೋ ಜನರಲ್ಲಿ ಇದೀಗ ಮಾನಸಿಕ ಕಾಯಿಲೆಗಳು ಹೆಚ್ಚಾಗಿರುವ ಲಕ್ಷಣಗಳು ಕಂಡುಬರುತ್ತಿವೆ.
ಧಾರವಾಡದ ಡಿಮ್ಹಾನ್ಸ್ ನಲ್ಲಿ ಸ್ಥಾಪಿಸಿರುವ ಆನ್ಲೈನ್ ಕೌನ್ಸ್ಲಿಂಗ್ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಹೆಚ್ಚಾಗಿ ಮಕ್ಕಳ ತಂದೆ-ತಾಯಿಗಳು ಹಾಗೂ ಮದ್ಯವ್ಯಸನಿಗಳು ಕರೆ ಮಾಡುತ್ತಿದ್ದಾರೆ. ಏಪ್ರಿಲ್ 4 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಕೇಂದ್ರವನ್ನು ಉದ್ಘಾಟಿಸಿದ್ದರು. ಇಲ್ಲಿ ದಿನದ 24 ಗಂಟೆಯೂ ನುರಿತ ತಜ್ಞರು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಈವರೆಗೂ 200ಕ್ಕೂ ಅಧಿಕ ಕರೆಗಳು ಬಂದಿದ್ದು, ಇದರಲ್ಲಿ ಮಕ್ಕಳು ಮತ್ತು ಮದ್ಯವ್ಯಸನಿಗಳ ಸಂಖ್ಯೆಯೇ ಹೆಚ್ಚಿದೆ. ಲಾಕ್ಡೌನ್ ಹಿನ್ನೆಲೆ ಮಕ್ಕಳು ಇಂಟರ್ನೆಟ್ಗೆ ಅಂಟಿಕೊಂಡಿರುವುದು ಪಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಮೊಬೈಲ್ ಗೆ ಅಂಟಿಕೊಂಡಿರುವ ಮಕ್ಕಳು ಆನ್ಲೈನ್ ಗೇಮ್ಸ್ ಹಾಗೂ ಯಾರೊಂದಿಗೂ ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ ಎಂದು ಮಕ್ಕಳ ವರ್ತನೆಯಿಂದ ಪಾಲಕರು ಕಂಗಾಲಾಗಿದ್ದಾರೆ.