ಧಾರವಾಡ: ಸ್ನೇಹಿತನ ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 3.5 ಲಕ್ಷ ದಂಡ ವಿಧಿಸಿ ಇಲ್ಲಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮಲ್ಲಿಕಾರ್ಜುನ ಗೌಡ ಅಲಿಯಾಸ್ ಮಲೀಕ್ ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಸ್ನೇಹಿತ ಬಸಯ್ಯ ಗುರಯ್ಯನವರ್ (35) ಅವರನ್ನು 2015 ರಲ್ಲಿ ಕೊಲೆಗೈದಿದ್ದ.
ಪ್ರಕರಣದ ಹಿನ್ನೆಲೆ: ಜೂಜಿನ ಮೋಹಕ್ಕೆ ಬಿದಿದ್ದ ಮಲ್ಲಿಕಾರ್ಜುನ ಗೌಡ, ಬಸಯ್ಯ ಅವರಿಂದ 13 ಲಕ್ಷ ಕೈ ಸಾಲ ಪಡೆದಿದ್ದ. ಹಣ ವಾಪಸ್ ಕೇಳಿದಾಗ ಆತನ ಕೊಲೆ ಮಾಡಲು ಸಂಚು ರೂಪಿಸಿದ್ದ. ಮನೆಯಲ್ಲಿ ಯಾರೂ ಇಲ್ಲದಾಗ ಬಸಯ್ಯನನ್ನು ಮನೆಗೆ ಕರೆಸಿಕೊಂಡು ಕುಡಿಸಿ ಕೊಲೆ ಮಾಡಿ ನಂತರ ಶವವನ್ನು ಕುಮಟಾ ಬಳಿಯ ಚಂಡಿಕಾ ನದಿಯಲ್ಲಿ ಬಿಸಾಡಿದ್ದ. ಮಗ ಪತ್ತೆಯಾಗದಿದ್ದಾಗ ಅನುಮಾನಗೊಂಡ ಬಸಯ್ಯ ಅವರ ತಾಯಿ ಕುಂದಗೋಳ ಠಾಣೆಗೆ ದೂರು ನೀಡಿದ್ದಳು.
ನಂತರ ಘಟನೆ ನಡೆದ ಒಂದು ವಾರದ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊನೆಗೆ ಮಲ್ಲಿಕಾರ್ಜುನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈಗ ಈ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಗಂಗಾಧರ ಕೆ ಎನ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಡಿ ಎ ಬಾಂಡೇಕರ್ ವಾದಿಸಿದ್ದರು.