ಧಾರವಾಡ: ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳಷ್ಟೇ ಬಾಕಿ ಇದೆ. ಹೀಗಿರುವಾಗ ಧಾರವಾಡದಲ್ಲಿ ರಾಜಕೀಯ ನಾಯಕರುಗಳು, ಪಕ್ಷಗಳ ಕಾರ್ಯಕರ್ತರು ಪತ್ರ ರಾಜಕೀಯ ಶುರು ಮಾಡಿದ್ದಾರೆ. ವಸತಿ, ಮನೆ ಹೆಸರಿನಲ್ಲಿ ಪತ್ರಗಳ ಮತಗಳ ಓಲೈಕೆ ಶುರು ಮಾಡಿದ್ದಾರೆ. ಹಾಲಿ ಶಾಸಕರೊಬ್ಬರು ವಸತಿ ಮನೆ ಕೊಡಿಸ್ತೇವೆ ಮತ್ತೊಮ್ಮೆ ನನಗೆ ಆಶೀರ್ವದಿಸಿ ಎಂದು ಪತ್ರ ಬರೆದಿದ್ದಾರೆ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ ಆರೋಪಿಸಿದ್ದಾರೆ.
ಪ್ರತಿ ಸಲ ಐದು ವರ್ಷಕ್ಕೊಂದು ಬಾರಿ ಹಕ್ಕುಪತ್ರ ಹಂಚುವ ರೋಗ ಬರುತ್ತದೆ. ಬಿಜೆಪಿಯವರಿಗೆ ಈಗಾಗಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸುವುದಿಲ್ಲ ಎನ್ನುವ ಭಯ ಪ್ರಾರಂಭವಾಗಿದೆ. ವಾಜಪೇಯಿ ನಗರ, ರಾಮಲಿಂಗನಗರದಲ್ಲಿ ಹಕ್ಕುಪತ್ರ ಹಂಚುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ ಮನೆ ಜಾರಿ ಆಗಿದೆ. ಬಂದು ಪಡೆದುಕೊಳ್ಳಿ ಎಂದು ಬೆಲ್ಲದ ಅವರು ಪತ್ರ ಹಾಕುತ್ತಾರೆ. ಅವರು ಆ ಪತ್ರ ಹಿಡಿದುಕೊಂಡು ಬೆಲ್ಲದ್ ಮನೆಗೆ ಹೋಗಬೇಕು. ಅಲ್ಲೊಂದು ಪತ್ರ ಕೊಡುತ್ತಾರೆ ಅದನ್ನು ತೆಗೆದುಕೊಂಡು ಕಾರ್ಪೋರೇಷನ್ಗೆ ಹೋಗಬೇಕು. ಅಲ್ಲಿನ ಸಿಬ್ಬಂದಿ ಅವರ ಏಜೆಂಟ್ಗಳ ರೀತಿ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಪತ್ರ ಬರೆದು ಆಮಿಷ ತೋರುತ್ತಿದ್ದಾರೆ ಎಂದು ದೀಪಕ್ ಚಿಂಚೂರೆ ಹರಿಹಾಯ್ದಿದ್ದಾರೆ. ಶಾಸಕ ಅರವಿಂದ ಬೆಲ್ಲದ ಅವರ ಲೆಟರ್ ಹೆಡ್ ಹಾಗೂ ಸಹಿ ಇರುವ ಪತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಫಲಾನುಭವಿ ಆಯ್ಕೆ ಎನ್ನುವ ಪತ್ರವಿದೆ. ಈಗಾಗಲೇ ಹಂಚಿಕೆಯಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಕೊಡದೇ ಬೇರೆಯವರಿಗೆ ಈ ರೀತಿ ಪತ್ರ ಬರೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ವೈರಲ್ ಆಗುತ್ತಿರುವ ಪತ್ರ ನಕಲಿ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ನಕಲಿ ಪತ್ರ ಇಟ್ಟುಕೊಂಡು ವಿರೋಧ ಪಕ್ಷದವರು ವ್ಯರ್ಥ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಪತ್ರದ ಸತ್ಯಾಸತ್ಯತೆ ತಿಳಿಸುವಂತೆ ಕಾಂಗ್ರೆಸ್‌ಗೆ ಬಿಜೆಪಿಯವರು ಸವಾಲು ಹಾಕಿದ್ದಾರೆ. ಇನ್ನು ಈ ಕುರಿತು ಶಾಸಕ ಅರವಿಂದ ಬೆಲ್ಲದ್ ಅವರು ಸಹ ಸ್ಪಷ್ಟನೆ ಕೊಟ್ಟಿದ್ದಾರೆ.
ಸ್ಲಂನಲ್ಲಿರುವಂತ ಕುಟುಂಬಕ್ಕೆ ಸೂರು ಒದಗಿಸಬೇಕು ಹಾಗೂ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸೂರು ಸಿಗಬೇಕು ಎಂಬುದು ನಮ್ಮ ಪ್ರಧಾನಿ ಆಶಯ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಆಶ್ರಯ ಮನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬಡವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ. ಇದು ನಮ್ಮ ಸರ್ಕಾರದ ಬಹುದೊಡ್ಡ ಸಾಧನೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹಕ್ಕುಪತ್ರ ನೀಡಲು ಆಗಿರಲಿಲ್ಲ. ಈಗ ನಾನು ಅಷ್ಟೇ ಅಲ್ಲ 224 ಶಾಸಕರೂ ಸಹ ಹಕ್ಕುಪತ್ರ ನೀಡುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಹಂಕಾರ, ದರ್ಪ ವರ್ಕೌಟ್ ಆಗಲ್ಲ: ಪ್ರೀತಂ ಗೌಡರಿಗೆ ನಿಖಿಲ್ ಟಾಂಗ್