ಹುಬ್ಬಳ್ಳಿ: "ಮಕ್ಕಳ ಶಾಲಾ ಪಠ್ಯದಲ್ಲಿ ಯಾವುದೇ ರೀತಿಯ ರಾಜಕಾರಣ ತರಬಾರದು. ಯಾವುದೇ ಪಕ್ಷದಲ್ಲೇ ಇರಲಿ, ಅಜೆಂಡಾದಲ್ಲಿ ಪಕ್ಷದವರ ಬಗ್ಗೆ ಹಾಕಬಾರದು. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ನೈತಿಕ ಶಿಕ್ಷಣವೇ ಇಂದಿನ ಪಠ್ಯದಲ್ಲಿಲ್ಲ" ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶನಿವಾರ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, "ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಬೆಳವಡಿ ಮಲ್ಲಮ್ಮ ಅವರ ಹೆಸರು ಎಲ್ಲೂ ಇಲ್ಲ. ಎಷ್ಟೋ ಮಕ್ಕಳಿಗೆ ಶ್ರವಣ ಕುಮಾರ ಎಂದರೆ ಯಾರೆಂಬುದೇ ಗೊತಿಲ್ಲ. ನಮ್ಮಂತವರ ಸಲಹೆಯನ್ನು ಇಂದಿನ ಸಚಿವರು, ಅಧಿಕಾರಿಗಳು ಕೇಳಬೇಕು. ಸಚಿವರು, ಅಧಿಕಾರಿಗಳು ಸಲಹೆ ಕೇಳಿದರೆ ಹೇಳುವೆ. ನಾನಾಗಿಯೇ ಏನೂ ಹೇಳಲ್ಲ" ಎಂದರು.
"ಮಕ್ಕಳಿಗೆ ಯಾವುದಾದರೂ ಪಠ್ಯ ಸರಿ ಇಲ್ಲ ಎಂದರೆ ತೆಗೆಯಬಹುದು. ಯಾವುದೇ ರಾಜಕಾರಣಿಯ ಹೆಸರು ಹಾಕಿದರೆ ತೆಗೆಯಲಿ. ಕಿತ್ತೂರು ಚೆನ್ನಮ್ಮ, ಡಾ.ಅಂಬೇಡ್ಕರ್, ಬಸವೇಶ್ವರ ಹಾಗೂ ಅಂಬೇಡ್ಕರ್ ಅವರ ತಾಯಂದಿರ ಬಗ್ಗೆ ಪಠ್ಯದಲ್ಲಿ ಸೇರಿಸಲಿ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಧನೆ ಮಾಡಲು ಅವರ ತಾಯಿಯ ಪಾತ್ರ ಹಿರಿದು. ಅಂತವರ ಬಗ್ಗೆ ಮಕ್ಕಳಿಗೆ ಗೊತ್ತಾಗಬೇಕು. ನಾನೂ ಸಹ ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ನನ್ನ ತಾಯಿಯೇ ಕಾರಣ. ತಾಯಿಯ ಶ್ರಮ ತ್ಯಾಗ ಬಹಳ ದೊಡ್ಡದು" ಎಂದು ಹೇಳಿದರು.
"ಸಾಧಕರ ಹಿಂದಿನವರ ಹೆಸರು ಎಲ್ಲಿಯೂ ಇಲ್ಲ. ಆದ್ದರಿಂದ ಇಂದು ನಿಜವಾದ ಶ್ರಮವಹಿಸಿದವರ ಬಗ್ಗೆ ಪಠ್ಯದಲ್ಲಿ ವಿಷಯ ಸೇರ್ಪಡೆಯಾಗಬೇಕು. ಸಾಧಕರಿಗೆ ಜನ್ಮ ಕೊಟ್ಟವರು, ಬೆಳೆಸಿದವರ ಬಗ್ಗೆ ಪಾಠ ಅಗತ್ಯ" ಎಂದು ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಮಕ್ಕಳ ಅನುಕೂಲಕ್ಕೆ ಪಠ್ಯ ಬದಲಾಯಿಸಿದರೆ ತಪ್ಪೇನು?: ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಗೀತಾ ಶಿವರಾಜ್ಕುಮಾರ್
ಹೆಡ್ಗೆವಾರ್, ಸಾವರ್ಕರ್ ಕುರಿತ ಪಠ್ಯ ಹಿಂತೆಗೆತ: ಕರ್ನಾಟಕ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್, ಹಿಂದೂ ಮಹಾಸಭಾ ಮುಖಂಡ ವಿ.ಡಿ. ಸಾವರ್ಕರ್ ಕುರಿತಾದ ಪಾಠ ತೆಗೆಯಲು ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ(ಜೂ.15)ಹೇಳಿದ್ದರು.
ಸಂವಿಧಾನದ ಪೀಠಿಕೆ ಓದಲು ಆದೇಶ: ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಜಾರಿಗೆ ತರಲು ಜೂ. 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್. ಮಹದೇವಪ್ಪ, ಖಾಸಗಿ, ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಶಾಲಾ- ಕಾಲೇಜು, ವಿಶ್ವವಿದ್ಯಾಲಯಗಳಲ್ಲೂ ಸಂವಿಧಾನದ ಪೀಠಕೆ ಓದಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದ್ದರು.