ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ 'ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡುವ ವಿಚಾರ' ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿಗಳು, ಈ ಬಗ್ಗೆ ಅವರನ್ನೇ ಕೇಳಿ. ನಾನು ಅವರ ವಕ್ತಾರ ಅಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಿಎಂ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮರು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಮುಸ್ಲಿಮರಿಗೆ ಅನುದಾನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ನಾನು ಸಿದ್ದರಾಮಯ್ಯ ವಕ್ತಾರನಲ್ಲ. ಅವರಿಗೆ ಬಹಳ ಅನುಭವ ಇದೆ. ಹೆಚ್ಚಿನ ಮಾಹಿತಿಯೂ ಅವರಿಗಿರುತ್ತೆ. ಅದಕ್ಕೆ ಅವರನ್ನೇ ಕೇಳೋದ್ ಒಳ್ಳೆಯದು. ಅದಕ್ಕೆ ನಾನು ಉತ್ತರ ಕೊಡಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ನಾವೂ ಚೆನ್ನಾಗಿದೀವಿ ಎಂದು ಹರಿಪ್ರಸಾದ್ ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದರು.
ಸಾಮಾಜಿಕ ನ್ಯಾಯ ಪರಿಕಲ್ಪನೆಯ ಹೇಳಿಕೆ - ಗುಂಡೂರಾವ್: ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಅನುದಾನ ಹಂಚಿಕೆ ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಬಿಜೆಪಿ ಯಾಕೆ ಇಷ್ಟೊಂದು ಗಾಬರಿಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ. ಸರ್ವರಿಗೂ ಸಮಬಾಳು ಸಮಪಾಲು ಎಂಬುವಂತ ರೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಯಾವ ಸಮಾವೇಶದಲ್ಲಿ ಹೇಳಿದ್ದಾರೆ ಅನ್ನೋದು ಮುಖ್ಯ. ಮುಸ್ಲಿಂ ಸಮಾವೇಶದಲ್ಲಿ ಅವರಿಗಾಗಿ ಏನು ಮಾಡುತ್ತೇವೆ ಅನ್ನೋದನ್ನು ಹೇಳಬೇಕಾಗುತ್ತದೆ. ಬೇರೆ ಸಮುದಾಯದ ಸಮಾವೇಶದಲ್ಲಿ ಅವರಿಗೆ ಏನು ಮಾಡುತ್ತೇವೆ ಅಂತ ವಿವರಿಸಬೇಕಾಗುತ್ತದೆ. ಇದರಲ್ಲಿ ತಪ್ಪು ಹುಡುಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
2 ದಿನ ಉತ್ತರ ಕರ್ನಾಟಕದ ಚರ್ಚೆ- ಸಚಿವ ಜಾರಕಿಹೊಳಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅದಕ್ಕಾಗಿಯೇ ಎರಡು ದಿನಗಳನ್ನು ನಿಗದಿ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆಗ್ತಿದೆ. ಇದು ಒಳ್ಳೆಯ ಬೆಳವಣಿಗೆ. ಶಾಸಕರು ಗೈರು ಹಾಜರಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾರೂ ಕೂಡ ಗೈರಾಗುವುದಿಲ್ಲ. ಸದನಕ್ಕೆ ಎಲ್ಲರೂ ಬಂದಿರುತ್ತಾರೆ. ಆದರೆ, ಯಾವುದೋ ಕಾರಣಕ್ಕಾಗಿ ಸದನದೊಳಗೆ ಇರಲಿಕ್ಕಿಲ್ಲ. ಅವಶ್ಯಕತೆ ಇದ್ದಾಗ ಬರುತ್ತಾರೆ ಎಂದು ಅವರು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಸರ್ಕಾರದ್ದು ಕಟುಕರ ಹೃದಯ.. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ : ಆರ್ ಅಶೋಕ್