ಧಾರವಾಡ: ಭೂಸ್ವಾಧೀನ ಪ್ರಕ್ರಿಯೆಗೆ ರೈತರ ಬಳಿ ಇರುವ ದಾಖಲೆಗಳ ಕ್ರೋಢೀಕರಣ ಮತ್ತು ಪರಿಹಾರ ಒದಗಿಸುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸಲು ಧಾರವಾಡ ಜಿಲ್ಲಾಡಳಿತ ಮುಂದಾಗಿದೆ.
ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಭೂ ದಾಖಲೆಗಳ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಹಾಗೂ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರು ಇಂದು ಇಟಿಗಟ್ಟಿ ಗ್ರಾಮಕ್ಕೆ ತೆರಳಿದ್ರು. ಇಟಿಗಟ್ಟಿ ಹಾಗೂ ಗಾಮನಗಟ್ಟಿ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆ ಪ್ರದೇಶಕ್ಕೆ ಅಗತ್ಯವಿರುವ ಸುಮಾರು 587 ಎಕರೆ ಭೂಮಿಯನ್ನು ರೈತರಿಂದ ಪಡೆಯುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಇಟಿಗಟ್ಟಿ ಗ್ರಾಮದಲ್ಲಿ 97 ರೈತರಿಗೆ ಸೇರಿದ ಸುಮಾರು 473 ಎಕರೆ ಜಮೀನನ್ನು ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಎಕರೆಗೆ 55 ಲಕ್ಷ ರೂ.ಗಳಂತೆ ಈಗಾಗಲೇ 11 ಜನ ರೈತರಿಂದ 30 ಎಕರೆ 36 ಗುಂಟೆ ಜಮೀನು ಖರೀದಿಸಿ 14.51 ಕೋಟಿ ರೂ ಪಾವತಿಸಲಾಗಿದೆ. ಗಾಮನಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿಯೂ 21 ರೈತರಿಗೆ ಸೇರಿದ 114 ಎಕರೆ 35 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಇಂದು ನೇರವಾಗಿ ರೈತರ ಬಳಿ ತೆರಳಿದ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಂದ ಭೂಮಿಯ ದಾಖಲೆಗಳು, ಬ್ಯಾಂಕ್ ಖಾತೆ ಪುಸ್ತಕ, ನಷ್ಟಪೂರ್ತಿ ಕಾಗದ (Indemnity Bond), ಒಪ್ಪಂದ ದಾಖಲೆ ( Agreement Bond) , ಆಧಾರ್ ಕಾರ್ಡ, ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದರು.
ಇಟಿಗಟ್ಟಿ ಗ್ರಾಮದಲ್ಲಿ ಇಂದು ಎಲ್ಲ ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸಿದ ಏಳು ಜನ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಬಿಡುಗಡೆಗೊಳಿಸಿ, ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಇನ್ನುಳಿದ ರೈತರಿಂದ ಕೆಲವು ದಾಖಲೆಗಳನ್ನು ತ್ವರಿತವಾಗಿ ಪಡೆದು ಪರಿಹಾರ ವರ್ಗಾವಣೆ ಮಾಡಲು ನಿರ್ದೇಶನ ನೀಡಿದರು. ಗಾಮನಗಟ್ಟಿ ಗ್ರಾಮದಲ್ಲಿಯೂ ಸಹ ಇದೇ ರೀತಿ ಕಾರ್ಯ ಕೈಗೊಂಡು ರೈತರಿಗೆ ತ್ವರಿತ ಪರಿಹಾರ ಒದಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.
ಗ್ರಾಮದ ರೈತರ ಪರವಾಗಿ ರವೀಂದ್ರ ದೇಸಾಯಿ ಮಾತನಾಡಿ, ಇಟಿಗಟ್ಟಿ ಗ್ರಾಮಸ್ಥರ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ,ರೈತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ತೊಂದರೆಯಾಗದ ರೀತಿಯಲ್ಲಿ ಒದಗಿಸುತ್ತಿರುವ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಉಪವಿಭಾಗಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ್, ವಿಶೇಷ ಭೂಸ್ವಾಧೀನಾಧಿಕಾರಿ ಶಾರದಾ ಕೋಲಕಾರ, ಜಂಟಿ ಕೈಗಾರಿಕಾ ನಿರ್ದೇಶಕ ದೊಡ್ಡಬಸವರಾಜ, ಧಾರವಾಡ ತಹಸೀಲ್ದಾರ್ ಡಾ.ಸಂತೋಷ ಬಿರಾದಾರ ಸೇರಿದಂತೆ ಇಟಿಗಟ್ಟಿ ಗ್ರಾಮದ ರೈತರು ಇದ್ದರು.