ಧಾರವಾಡ: ಈ ಬಾರಿ ರಾಜ್ಯದ ಹಲವೆಡೆ ಬರ ಪರಿಸ್ಥಿತಿ ಎದುರಾಗಿದ್ದು, ಧಾರವಾಡ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಹೌದು, ಧಾರವಾಡ ಜಿಲ್ಲೆಯಲ್ಲಿಯೂ ಬರ ತಾಂಡವಾಡುತ್ತಿದೆ. ಜಿಲ್ಲೆಯ ಕೆಲವೆಡೆ ನೀರಿಲ್ಲದೇ ತೊಂದರೆಯನ್ನು ಸಹ ಜನ ಅನುಭವಿಸುತ್ತಿದ್ದಾರೆ. ಜಿಲ್ಲೆಯ ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಯಾವುದೇ ನೀರಿನ ಆಕರ ಇಲ್ಲ. ಹೀಗಾಗಿ ಜಿಲ್ಲಾಡಳಿತ ಆಯಾ ಗ್ರಾಮಗಳಲ್ಲಿರುವ ಬೋರ್ವೆಲ್ಗಳನ್ನೇ ರೀಚಾರ್ಜ್ ಮಾಡಿಸಿ, ಅದರಿಂದ ನೀರು ಪಡೆಯುತ್ತಿದೆ.
ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸುವುದಕ್ಕಾಗಿಯೇ ಜಿಲ್ಲಾಡಳಿತ ಟೋಲ್ ಫ್ರಿ ನಂಬರ್ ಜನರಿಗೆ ಕೊಟ್ಟಿದ್ದು, ವಾಟ್ಸಪ್ ನಂಬರ್ ಕೂಡ ಕೊಟ್ಟಿದೆ. ಜನ ಇದರಲ್ಲಿ ವಿಡಿಯೋ, ಫೋಟೋ ಕೂಡ ಹಾಕಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಇನ್ನು ಜಿಲ್ಲೆಯಲ್ಲಿ 171 ಕೊಳವೆ ಬಾವಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಅಭಿವೃದ್ಧಿಗೊಂಡ 87 ಕೊಳವೆ ಬಾವಿಗಳು 35 ಗ್ರಾಮಗಳ ನೀರಿನ ದಾಹ ತಣಿಸುತ್ತಿವೆ. ಒಟ್ಟಾರೆಯಾಗಿ ಒಂದೆಡೆ ಮಲಪ್ರಭಾ ನದಿಯ ಬಲದಂಡೆ ಕಾಲುವೆ, ಮತ್ತೊಂದೆಡೆ ಅಭಿವೃದ್ಧಿಗೊಳ್ಳುತ್ತಿರುವ ಕೊಳವೆ ಬಾವಿಗಳಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರಿನಿಂದಾಗಿ ಧಾರವಾಡ ಜಿಲ್ಲೆಯ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.