ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಸಿಬ್ಬಂದಿಯ ಬದುಕು ಇದೀಗ ಬೀದಿಗೆ ಬಿದ್ದಿದೆ. ಅಲ್ಲದೇ ಇಲಾಖೆಯ ಅಧಿಕಾರಿಗಳು ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾರೆ.
ಪಕ್ಕಿರಯ್ಯ ಅಂದಾನಯ್ಯ ನವಲಗುಂದಮಠ ಎಂಬುವ ವ್ಯಕ್ತಿ ಲಕ್ಷ್ಮೇಶ್ವರ ಘಟಕದ ಗದಗ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ 2006 ರಲ್ಲಿ ಸಂಭವಿಸಿದ್ದ ಅಪಘಾತದಿಂದ ಗಾಯಗೊಂಡಿದ್ದಾರೆ.
2006ರಲ್ಲಿ ಮಿನಿ ಬಸ್ ಚಾಲನೆ ಮಾಡುವ ಸಂದರ್ಭದಲ್ಲಿ ಸ್ಟೇರಿಂಗ್ ಕಟ್ ಆಗಿ ಹಲ್ಲುಗಳು ಬಿದ್ದು, ತೀರಾ ಸಂಕಷ್ಟದ ಬದುಕನ್ನು ಎದುರಿಸಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಅಪಘಾತದ ಸಂದರ್ಭದಲ್ಲಿ ಕಾಲು ಕೂಡ ತೀವ್ರವಾಗಿ ಗಾಯವಾಗಿದ್ದು, ಬಲಗಡೆ ಕಾಲು ಮಡಚುವುದಕ್ಕೂ ಬಾರದಂತಾಗಿದೆ.
ಸಿಬ್ಬಂದಿ ವಾದವೇನು?: ನಾನು ಇಲಾಖೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿತ್ತು. ನಂತರ ನನಗೆ ಕಚೇರಿ ಸಹಾಯಕನಾಗಿ ನೇಮಿಸಲಾಯಿತು. ಆದ್ರೆ ಇಲ್ಲಿನ ಅಧಿಕಾರಿಯೊಬ್ಬರು ನನ್ನ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡುತ್ತಿದ್ದಾರೆ. ಜನವರಿ 5 ರಂದು ಊಟಕ್ಕೆ ಹೊರಟಿದ್ದ ನನ್ನ ಮೇಲೆ ರೇಗಾಡಿ ಕೆಲಸದಿಂದ ವಜಾಗೊಳಿಸಿದ್ದಾರೆ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇನೆ ಎಂದು ಸಿಬ್ಬಂದಿ ಪಕ್ಕಿರಯ್ಯ ಅಂದಾನಯ್ಯ ತಿಳಿಸಿದರು.
ಸಾರಿಗೆ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸುವ ವೇಳೆಯಲ್ಲಿ ಗಾಯಗೊಂಡಿದ್ದ ಸಿಬ್ಬಂದಿಗೆ ಅಧಿಕಾರಿಗಳು ಇದೀಗ ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿರುವುದರಿಂದ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಲ್ಲದೇ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರು ಇತ್ತ ಕಡೆ ಗಮನ ಹರಿಸಿ ಮತ್ತೆ ನೌಕರಿ ನೀಡಬೇಕು ಎಂಬುದು ದಲಿತ ಸಂಘಟನೆಯ ಆಗ್ರಹವಾಗಿದೆ.