ಹುಬ್ಬಳ್ಳಿ: ಕೆಎಲ್ಇ ಶಿಕ್ಷಣ ಸಂಸ್ಥೆ ಸಾರ್ವಜನಿಕ ಸೇವೆಗೆ ಮುಂದಾಗಿದ್ದು, ಇಲ್ಲಿನ ಬಿವಿಬಿ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಆಮ್ಲಜನಕ ಸಹಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಿದೆ. ಈ ಕಾರ್ಯಕ್ಕೆ ಸೇವಾ ಭಾರತಿ ಟ್ರಸ್ಟ್ ಕೂಡ ಕೈ ಜೋಡಿಸಿದೆ.
ಸುಮಾರು 80 ಆಮ್ಲಜನಕ ಬೆಡ್ ಸಹಿತ ಉಚಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಿದ್ದು, ಕಾಲೇಜಿನ ದೇಶಪಾಂಡೆ ಸ್ಕಾಲರ್ಸ್ ಕಟ್ಟಡದಲ್ಲಿ ಆಮ್ಲಜನಕ ಸಹಿತ ಉಚಿತ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಲು ಈ ನಿರ್ಧಾರ ಸಹಾಯಕಾರಿಯಾಗಿದೆ. ಅಲ್ಲದೇ ಉಚಿತ ವೈದ್ಯಕೀಯ ಆರೈಕೆ ಕೂಡ ಈ ಕೋವಿಡ್ ಸೆಂಟರ್ನಲ್ಲಿ ದೊರೆಯಲಿದೆ.
ಸೋಂಕಿನ ಲಕ್ಷಣ ಇದ್ದವರು ಹಾಗೂ ಇಲ್ಲದವರು ದಾಖಲಾಗಬಹುದು. ರೋಗಿಗಳ ಆಮ್ಲಜನಕದ ಮಟ್ಟ ಕನಿಷ್ಠ 93 ಇರಬೇಕು. ಅಲ್ಲದೇ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಬಂದು ದಾಖಲಾಗಬಹುದಾಗಿದೆ. ಈ ಕೋವಿಡ್ ಕೇರ್ ಸೆಂಟರ್ನಲ್ಲಿ 7 ಜನ ವೈದ್ಯರು, 15 ಜನ ನರ್ಸ್ ಹಾಗೂ 20 ಜನ ಸಾಮಾನ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ದಿನದ 24 ಗಂಟೆಗಳ ಕಾಲ ಆಮ್ಲಜನಕ ಸಹಿತ ಕೋವಿಡ್ ಕೇರ್ ಸೆಂಟರ್ ಕಾರ್ಯನಿರ್ವಹಿಸಲಿದೆ. ರೋಗಿಗಳ ತುರ್ತು ಪರಿಸ್ಥಿತಿ ನಿಭಾಯಿಸಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡದ ಜನರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ನಿರ್ಧಾರದಿಂದ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ರಾಜ್ಯಾದ್ಯಂತ ತಲೆದೋರಿರುವ ಆಕ್ಸಿಜನ್ ಬೆಡ್ ಸಮಸ್ಯೆಗೆ ಪರಿಹಾರವನ್ನು ನೀಡುವ ಸದುದ್ದೇಶದಿಂದ ಕೆಎಲ್ಇ ಸಂಸ್ಥೆ ಹಾಗೂ ಸೇವಾ ಭಾರತಿ ಟ್ರಸ್ಟ್ ನಿರ್ಧಾರ ಜನರಿಗೆ ಉಪಯುಕ್ತವಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ನೀಡಲು ಕೆಎಲ್ಇ ಶಿಕ್ಷಣ ಸಂಸ್ಥೆ ಮುಂದಾಗಿದೆ.