ಹುಬ್ಬಳ್ಳಿ : ಅಧಿಕ ಬಡ್ಡಿ ನೀಡುವುದಾಗಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ ಖಾಸನೀಸ್ ಸಹೋದರರಿಗೆ ಸೇರಿದ ಆಸ್ತಿಯನ್ನು ಧಾರವಾಡ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.
ಇಲ್ಲಿಯ ಭೈರಿದೇವರಕೊಪ್ಪ ಬಳಿಯಿರುವ 1 ಗುಂಟೆ 8 ಅಣೆ ಫ್ಲಾಟ್ ಜಪ್ತಿ ಮಾಡಿದ್ದಾರೆ. ಧಾರವಾಡ ಉಪ ವಿಭಾಗ ಅಧಿಕಾರಿ ಮಹ್ಮದ್ ಜುಬೇರ್ ಹಾಗೂ ತಹಶೀಲ್ದಾರ್ ಶಶೀಧರ ಮಾಡ್ಯಾಳ ನೇತೃತ್ವದಲ್ಲಿ ವಶ ಪಡಿಸಿಕೊಳ್ಳಲಾಗಿದೆ.
ಹಿನ್ನೆಲೆ :
ಕಲಘಟಗಿಯ ಹರ್ಷಾ ಎಂಟರಟೇನ್ಮೆಂಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖಾಸನೀಸ್ ಸಹೋದರರಾದ ಸತ್ಯಭೋದ ಖಾಸನೀಸ್, ಸಂಜೀವ ಖಾಸನೀಸ್ ಹಾಗೂ ಶ್ರೀಕಾಂತ್ ಖಾಸನೀಸ್ ಸಹೋದರರು ವಂಚನೆ ಮಾಡಿದ್ದರು. 2017 ರಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಸಿಐಡಿ ಸಂಸ್ಥೆಯಿಂದ ಕೂಡ ತನಿಖೆ ಕೈಗೊಳ್ಳಲಾಗಿತ್ತು. ಸಿಐಡಿ ವರದಿಯಲ್ಲಿ ಉಲ್ಲೇಖಿತ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಹುಬ್ಬಳ್ಳಿ, ಕಲಘಟಗಿ ಹಾಗೂ ಬಳ್ಳಾರಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.