ಧಾರವಾಡ: ಕೆಸಿಸಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಬಾಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿಗಳ ಚೆಕ್‌ಅನ್ನು ನೀಡಲಾಯಿತು.
ಕೊರೊನಾ ವೈರಸ್ ಹರಡುವಿಕೆಯಿಂದ ಜನಜೀವನ ಅಸ್ತವ್ಯವಸ್ತಗೊಂಡಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ನಿರಂತರ ಶ್ರಮಿಸುತ್ತಿದೆ. ಸರ್ಕಾರದ ಚಾಣಾಕ್ಷತನದ ಕಾರ್ಯವೈಖರಿಯಿಂದ ಪರಿಸ್ಥಿತಿ ಗಂಭೀರ ಹಂತ ತಲುಪಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಸರ್ಕಾರಕ್ಕೆ ಈ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಸಲುವಾಗಿ ಬ್ಯಾಂಕ್ ಮತ್ತು ಬ್ಯಾಂಕಿನ ಸಿಬ್ಬಂದಿ ಸಂಗ್ರಹಿಸಿದ 10 ಲಕ್ಷ ರೂ.ಗಳನ್ನು ನೀಡಲು ಸಂತಸವಾಗುತ್ತಿದೆ ಎಂದು ಬಾಪುಗೌಡ ಪಾಟೀಲ್ ಹೇಳಿದರು.
ಅವಿಭಜಿತ ಧಾರವಾಡ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕ್ ಅಧೀನದ ಸಹಕಾರ ಸಂಘಗಳ ವತಿಯಿಂದ ಈಗಾಗಲೇ 19,20,800 ರೂಪಾಯಿಗಳನ್ನು ಸಂಗ್ರಹಿಸಿ, ಸಹಕಾರ ಇಲಾಖೆಯ ಉಪ ನಿಬಂಧಕರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ, ನಿಂಗನಗೌಡ ಮರಿಗೌಡರ, ಉಮೇಶ ಭೂಮಣ್ಣವರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ ಮತ್ತು ಅಧಿಕಾರಿಗಳು ಇದ್ದರು.