ಹುಬ್ಬಳ್ಳಿ : ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಕೆಲಸವನ್ನು ಮಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿವೆ. ನಾಳೆ ಮತ್ತು ನಾಡಿದ್ದು ಪಕ್ಷದ ಕಾರ್ಯಕಾರಣಿ ಸಭೆ ಇದೆ. ಸರ್ಕಾರದ ನೂತನ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬರುವುದಿಲ್ಲ ಎಂದರು.
ಸರ್ಕಾರದ ನಿಯಮದಂತೆ 300ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಕೋವಿಡ್‌ನಿಂದ ನಾವು ಇನ್ನೂ ಮುಕ್ತವಾಗಿಲ್ಲ. ಆ ಕಾರಣಕ್ಕೆ ನಾವು ನಾಳೆ ನಡ್ಡಾ ಸ್ವಾಗತಕ್ಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಜೆ.ಪಿ ನಡ್ಡಾ ನಾಳಿನ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಜೆ.ಪಿ. ನಡ್ಡಾ ಸ್ವಾಗತಕ್ಕೆ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿ ರದ್ದು ಮಾಡಲಾಗಿದೆ ಎಂದು ಅವರು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅದ್ಬುತ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ಪ್ರಮಾಣಿಕ, ಸಜ್ಜನ ರಾಜಕಾರಣಿ ಬಸವರಾಜ ಬೊಮ್ಮಾಯಿ. ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ ಎಂದ ಅವರು, ಕಾಂಗ್ರೆಸ್‌ನಲ್ಲಿ ಯಾವುದು ಸರಿ ಇಲ್ಲ. ಕೇಂದ್ರ ಅಷ್ಟೇ ಅಲ್ಲದೆ ರಾಜ್ಯದಲ್ಲಿಯೂ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಡೆದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.