ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿಯ ಬಿಡನಾಳದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ನಲ್ಲಿ ಈ ಹಿಂದಿನಿಂದಲೂ ವಿದ್ಯಾರ್ಥಿಗಳ ದಾಖಲಾತಿಗೆ ಬಹು ಬೇಡಿಕೆ ಇದೆ. ಕಾರಣ ಈ ಶಾಲೆಯಲ್ಲಿರುವ ಶೈಕ್ಷಣಿಕ ವ್ಯವಸ್ಥೆ. ಹೌದು, ಈ ಶಾಲೆಯಲ್ಲಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಹೆಚ್ಚಿನವರು ಮೆಚ್ಚಿಕೊಂಡಿದ್ದಾರೆ.
ಶಾಲೆಯ ಕಾಂಪೌಂಡ್ಗೆ ಲೇಪಿಸಿದ ಬಣ್ಣ, ಬರೆದ ಬರಹಗಳು, ಚಿತ್ರಗಳು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಜೊತೆಗೆ ಶಾಲೆಯ ಕಟ್ಟಡಗಳು ಬಣ್ಣದಿಂದ ಕಂಗೊಳಿಸುತ್ತಿವೆ. ಶಾಲೆಯ ಸುಸಜ್ಜಿತ ಕೊಠಡಿ, ಸಮೃದ್ಧ ಕ್ರೀಡಾಂಗಣ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಲ್ಯಾಬ್, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ ಸೇರಿದಂತೆ ಮಕ್ಕಳ ಸಮೃದ್ಧ ಜೀವನಕ್ಕೆ ಅಡಿಪಾಯ ಹಾಕಲು ಬೇಕಾದ ಎಲ್ಲಾ ಶೈಕ್ಷಣಿಕ ಸೌಲಭ್ಯಗಳನ್ನು ಈ ಸರ್ಕಾರಿ ಶಾಲೆ ಒಳಗೊಂಡಿದೆ. ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಂದ ಬಿಡಿಸಿ ಈ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತಿದ್ದಾರೆ.
ಸದ್ಯ ಈ ಶಾಲೆಯಲ್ಲಿ ಒಟ್ಟು 1,000ಕ್ಕೂ ಅಧಿಕ ಮಕ್ಕಳಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 7ನೇ ತರಗತಿವರೆಗೆ 847 ವಿದ್ಯಾರ್ಥಿಗಳಿದ್ದು, 1ನೇ ತರಗತಿ (ಕನ್ನಡ ಮಾಧ್ಯಮ)ಗೆ ಈಗಾಗಲೇ 60 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎಲ್ಕೆಜಿ, ಯುಕೆಜಿ ಮತ್ತು ಆಂಗ್ಲ ಮಾಧ್ಯಮ ತರಗತಿಗಳಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಇದರಿಂದಾಗಿ ಪ್ರತಿ ತರಗತಿಗೆ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಶಾಲಾ ಆಡಳಿತ ಮಂಡಳಿಗೆ ತಲೆನೋವಾಗಿದೆ. ಹೀಗಾಗಿಯೇ ಲಾಟರಿ ಮೂಲಕ ಮಕ್ಕಳಿಗೆ ಪ್ರವೇಶಾತಿ ನೀಡುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡಿದೆ.
1913ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಇಲ್ಲಿನ ಶಿಕ್ಷಣ ವ್ಯವಸ್ಥೆ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾ ಸಾಗಿತ್ತು. ಪರಿಣಾಮ ಪ್ರಸ್ತುತ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಕೆಜಿ, ಯುಕೆಜಿಗೆ ದಾಖಲಾತಿ ಸಂಖ್ಯೆ ಹೆಚ್ಚಿಸುವಂತೆ ಪೋಷಕರು ದುಂಬಾಲು ಬಿದ್ದಿದ್ದಾರೆ. ಶಾಲಾ ಆಡಳಿತ ಮಂಡಳಿ ಸರ್ಕಾರಕ್ಕೆ ಮತ್ತೊಂದು ವಿಭಾಗ ತೆರೆಯಲು ಅವಕಾಶಕ್ಕೆ ಅನುಮತಿ ಕೋರಿದೆ. ಎಸ್ಎಸ್ಎಲ್ಸಿಯಲ್ಲಿಯೂ ಉತ್ತಮ ಫಲಿತಾಂಶದ ಸಾಧನೆ ಮಾಡಿದೆ. ಈ ಎಲ್ಲದರ ಹಿಂದೆ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: 10, 20 ರೂಪಾಯಿಯ ನಾಣ್ಯಗಳ ಸ್ವೀಕಾರಕ್ಕೆ ಹೊಟೇಲ್ ಮಾಲೀಕರು ಗ್ರೀನ್ ಸಿಗ್ನಲ್!
ಶಾಲೆಯ ಹಳೇ ವಿದ್ಯಾರ್ಥಿ ಮೋಹನ ಅಸುಂಡಿ ಮಾತನಾಡಿ, ಉತ್ತಮ ಸ್ಮಾರ್ಟ್ ಬೋರ್ಡ್(5) ವ್ಯವಸ್ಥೆ, ಹೊಸ ತರಗತಿ ಕೊಠಡಿ(6), ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಶಾಲೆಗೆ ಒದಗಿಸಲಾಗಿದೆ. ಈ ಉತ್ತಮ ವ್ಯವಸ್ಥೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಪ್ರಮುಖ ಕಾರಣ. ಜೊತೆಗೆ ಶಾಲೆಯ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗೆ ಸೇರಿಸಬೇಕೆನ್ನುವ ಮನಸ್ಥಿತಿಗೆ ಪೋಷಕರು ಬಂದಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾನು ನನ್ನ ಕೈಯಲ್ಲಾದ ಪ್ರಯತ್ನ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಬೇಕಾದ ಉತ್ತಮ ವಾತಾವರಣ ಇದೆ ಎಂದು ತಿಳಿಸಿದರು.