ಧಾರವಾಡ: ಭೂ ಸುಧಾರಣೆ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಹೋರಾಟದಲ್ಲಿ ಲಾರಿಗೆ ಅಡ್ಡ ಮಲಗಿ ರೈತನೊಬ್ಬ ಲಾರಿ ತಡೆಯಲು ವಿನೂತನ ಪ್ರಯತ್ನ ಮಾಡಿದ್ದಾನೆ.
ಧಾರವಾಡದ ಜುಬಿಲಿ ವೃತ್ತದಲ್ಲಿ ಲಾರಿ ತಡೆಯಲು ನಾಗಪ್ಪ ಎಂಬ ರೈತ ಲಾರಿ ಚಕ್ರದಡಿ ಮಲಗಿದ್ದ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬೆಳಗಾವಿ ಕಡೆಯಿಂದ ಬರುತ್ತಿದ್ದ ಲಾರಿಗೆ ರೈತ ನಾಗಪ್ಪ ಅಡ್ಡ ಮಲಗಿ ಸಂಚಾರ ಮಾಡದಂತೆ ಎಚ್ಚರಿಸಿದ್ದಾನೆ. ರೈತ ನಾಗಪ್ಪ ಲಾರಿಗೆ ಅಡ್ಡ ಮಲಗಿದ್ದರಿಂದ ಪೊಲೀಸರು ಲಾರಿ ವಾಪಸ್ ಕಳುಹಿಸಿದರು.
ಇನ್ನು ಜಿಲ್ಲೆಯಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ಸಂಘಟನೆಗಳ ಸದಸ್ಯರು ಬೆಳಗ್ಗೆ 6 ಗಂಟೆಯಿಂದ ನಗರದ ಜುಬಿಲಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಕೃಷಿ ಸಂಘ, ಕರ್ನಾಟಕ ನವ ನಿರ್ಮಾಣ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಜುಬಿಲಿ ವೃತ್ತದಲ್ಲಿ ಪ್ರತಿಭಟಿಸಿ, ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ತಮಟೆ ಬಾರಿಸಿ, ಹಾಡು ಹಾಡುವ ಮೂಲಕ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಬಂದ್ ಹಿನ್ನೆಲೆ ರಸ್ತೆಗಳು ಬಿಕೋ ಎನ್ನುತ್ತಿದ್ದು, ಸಂಚಾರವಿಲ್ಲದೆ ಜನರು ಪರದಾಡುತ್ತಿರುವ ದೃಶ್ಯಗಳು ಕಂಡು ಬಂದವು. ಮಾರುಕಟ್ಟೆಯಲ್ಲಿನ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಕೆಲ ಖಾಸಗಿ ವಾಹನ ಸಂಚಾರ ಹೊರತುಪಡಿಸಿದ್ರೆ ಸಂಚಾರ ಸಂಪೂರ್ಣ ಬಂದ್ ಆಗಿದೆ.