ಧಾರವಾಡ: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದೇ ಪ್ರಸಿದ್ಧರಾದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ (93) ಅವರು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚೆನ್ನವೀರ ಕಣವಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು. ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಜನವರಿ 14ರಂದು ದಾಖಲಿಸಲಾಗಿತ್ತು.
ಚೆನ್ನವೀರ ಕಣವಿಯವರು ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದ್ದರು. ಕಣವಿಯವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ತಂದೆಯವರು ಆರಂಭದಲ್ಲಿ ಗದಗ ತಾಲೂಕಿನ ಶಿರುಂದದಲ್ಲಿ ಶಿಕ್ಷಕರಾಗಿದ್ದ ಕಾರಣ ಕಣವಿಯಲವರು ಅಲ್ಲಿಯೇ ಬಾಲ್ಯ ಕಳೆದಿದ್ದರು. ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದಿದ್ದರು.
ಬಳಿಕ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿದ್ದರು. ನಂತರ ಧಾರವಾಡದ ಮುರುಘಾ ಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಹಾಗೂ ಬಳಿಕ ಕರ್ನಾಟಕ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಕಣವಿಯವರ ಕವನಗಳನ್ನು ನೋಡಿ ಡಿವಿಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು. 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಬಾಲ್ಯದಲ್ಲೇ ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದ ಕಣವಿ, ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದರು. ಧಾರವಾಡದ ಮಾಳಮಡ್ಡಿಯಲ್ಲಿ ಕಾವ್ಯಾನುಭವ ಮಂಪಟ ಆರಂಭಿಸಿ ಕವಿತಾ ವಾಚನ ಅಭಿಯಾನ ನಡೆಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿದ ಅವರು, ಬಳಿಕ 1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದ್ದರು.
ಇವರ ಪತ್ನಿ ಶಾಂತಾದೇವಿ ಕೂಡ ಸಾಹಿತಿ, ಕನ್ನಡದ ಖ್ಯಾತಿ ಕತೆಗಾರ್ತಿಯಾಗಿದ್ದು, ಇತ್ತೀಚೆಗೆ ನಿಧನರಾಗಿದ್ದಾರೆ. ಪತ್ನಿ ನಿಧನದ ಬಳಿಕ ಕಣವಿಯವರು ಸ್ವಲ್ಪ ಲವಲವಿಕೆ ಕಳೆದುಕೊಂಡಿದ್ದರು.
ಜನಪ್ರಿಯ ಕಾವ್ಯಗಳು: ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ಸೇರಿ 15ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡಿವೆ.
ವಿಮರ್ಶಾ ಕೃತಿಗಳು: ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು
ಮಕ್ಕಳ ಕೃತಿ: ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ
ಪ್ರಶಸ್ತಿ ಮತ್ತು ಪುರಸ್ಕಾರಗಳು:
- 1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
- 2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ
- ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ
- ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್