ಹುಬ್ಬಳ್ಳಿ: ಕಳೆದ ಹಲವು ದಶಕಗಳಿಂದ ಹೊತ್ತಿ ಉರಿದಿದ್ದ ಈದ್ಗಾ ವಿವಾದ ಸುಪ್ರೀಂ ಕೋರ್ಟ್ ಆದೇಶದಿಂದ ತಣ್ಣಗಾಗಿತ್ತು. ಟಿಪ್ಪು ಜಯಂತಿ ಆಚರಣೆ ಬೆನ್ನಲ್ಲೇ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂದು ಶ್ರೀರಾಮಸೇನೆ ವತಿಯಿಂದ ಕನಕ ಜಯಂತಿ ಆಚರಣೆ ಮಾಡಲಾಯಿತು.
ಹಲವು ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ಪಾಲಿಕೆಯ ಷರತ್ತುಬದ್ಧ ಅನುಮತಿ ಮೇರೆಗೆ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಎಲ್ಲರಂತೆ ನಮಗೂ ಕನಕ ಜಯಂತಿ ಆಚರಣೆ ಮಾಡಲು ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಇಂದು ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಈದ್ಗಾ ಮೈದಾನದಲ್ಲಿ ಪೆಂಡಾಲ್ ಹಾಕಿ ಕನಕ ದಾಸರ ಜಯಂತಿ ಆಚರಿಸಿದರು.
ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಕನಕದಾಸ ಜಯಂತಿ ಆಚರಣೆಗೆ ಅವಕಾಶ ನೀಡಲಾಗಿತ್ತು. ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಮಾತನಾಡಿದ ಮುತಾಲಿಕ್, 'ಕನಕ ದಾಸರು ನಾಡಿಗೆ ಕೊಟ್ಟ ಸಂದೇಶ ಶ್ರೇಷ್ಠವಾಗಿದೆ. ಆದರೆ ಇಂದು ರಾಜಕಾರಣಿಗಳು ಜಾತಿ, ಮತ, ಪಂಥದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮಂತಹ ಸಂಘಟಿಕರು ಅದನ್ನು ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ಹೋಗಲಾಡಿಸಿ ಮಹನೀಯರ ತತ್ವ ಸಿದ್ದಾಂತಗಳಿಗೆ ಬದ್ಧರಾಗಿದ್ದೇವೆ ಎಂದರು.
ಗೋ ಮೂತ್ರ ಸಿಂಪಡಿ ಮೈದಾನ ಶುಚಿಗೊಳಿಸಿದ ಮುತಾಲಿಕ್: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮೈದಾನವನ್ನು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಗೋ ಮೂತ್ರ ಸಿಂಪಡಿಸುವ ಮೂಲಕ ಶುಚಿಗೊಳಿಸಿದರು. ಟಿಪ್ಪು ಓರ್ವ ಮತಾಂಧ. ಆತನ ಜಯಂತಿ ಆಚರಣೆ ಹಿನ್ನೆಲೆ ಮೈದಾನ ಅಪವಿತ್ರವಾಗಿತ್ತು ಎಂದರು. ಬಳಿಕ ಕನಕ ದಾಸರ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಯಿತು.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ: ಕೊನೆಗೆ ಭಾವಚಿತ್ರ ಸ್ಥಳಾಂತರ