ಹುಬ್ಬಳ್ಳಿ/ಲಕ್ನೋ: ಉತ್ತರಪ್ರದೇಶದ ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಆರೋಪದಲ್ಲಿ ಮಹ್ಮದ್ ಸಾದಿಕ್ ಜಾಫರ್‌ನನ್ನು ವಶಕ್ಕೆ ಪಡೆದ ಆಂತರಿಕ ಭದ್ರತಾ ಅಧಿಕಾರಿಗಳು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿ ಬುಧವಾರ ಬಿಡುಗಡೆ ಮಾಡಿದ್ದಾರೆ.
ಸುನ್ನಿ ಯೂತ್ ಫೋರ್ಸ್ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸಯ್ಯದ್‌ನನ್ನು ನಾಗಪುರದಲ್ಲಿ ತಿವಾರಿ ಹತ್ಯೆ ಪ್ರಕರಣ ಕುರಿತು ಬಂಧಿಸಲಾಗಿತ್ತು. ಮಹ್ಮದ್ ಸಾದಿಕ್ ಸಹ ಸುನ್ನಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಸಯ್ಯದ್ ಜೊತೆ ಸಂಪರ್ಕದಲ್ಲಿದ್ದನಂತೆ. ಈ ಅನುಮಾನದ ಮೇಲೆ ಅವನನ್ನು ಐಎಸ್‌ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಎರಡು ದಿನ ಮಹ್ಮದ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಐಎಸ್‌ಡಿ ಅಧಿಕಾರಿಗಳು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿ ಬಂದ ನಂತರ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಹ್ಮದ್‌ನಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಮಹ್ಮದ್ ಸಾದಿಕ್‌ನ ಅಪರಾಧ ಪ್ರಕರಣಗಳು, ಕಾರ್ಯ ಚಟುವಟಿಕೆಗಳು ಹಾಗೂ ಅವನ ದೂರವಾಣಿ ಕರೆಯ ಸಂಪೂರ್ಣ ಮಾಹಿತಿಗಳನ್ನು ಐಎಸ್‌ಡಿ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಪೊಲೀಸರರಿಂದ ಕಲೆಹಾಕಿದ್ದು, ತನಿಖೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತಾಂತ್ರಿಕ ಸಹಾಯವನ್ನು ಪೊಲೀಸರು ನೀಡಿದ್ದಾರೆ ಎನ್ನಲಾಗಿದೆ.
ಮಹ್ಮದ್ ಸಾಧಿಕ್ನ ಅಪರಾಧ ಪ್ರಕರಣಗಳು:
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಮಹ್ಮದ್ ಸಾದಿಕ್ ಹೆಸರು 2013ರಲ್ಲಿ ಸೇರ್ಪಡೆಗೊಂಡಿತ್ತು. ಸಾರ್ವಜನಿಕರಿಗೆ ಹಿಂಸೆ ಕೊಡುವುದು, ಹುಡುಗಿಯರನ್ನು ಚುಡಾಯಿಸುವುದು, ಕೋಮು ಗಲಭೆ ಸೃಷ್ಟಿಸುವುದು, ಕಳ್ಳಭಟ್ಟಿ ಮಾರಾಟ, ಕಳ್ಳ ಸಾಗಾಣಿಕೆದಾರರನ್ನು ರಕ್ಷಿಸುವುದು, ಕಳ್ಳರು, ಜೇಬುಗಳ್ಳರನ್ನು ರಕ್ಷಿಸುವ ಕುರಿತಾದ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿದ್ದವು.