ಹುಬ್ಬಳಿ: ವಿಧಾನಸಭೆ ಕಲಾಪದಲ್ಲಿ ಖಾಸಗಿ ಮಾಧ್ಯಮ ನಿಷೇಧ ಖಂಡಿಸಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ಪತ್ರಕರ್ತರ ಸಭಾಭವನದಿಂದ ತಹಶೀಲ್ದಾರ್ ಕಚೇರಿವರೆಗೆ ರ‍್ಯಾಲಿ ನಡೆಸಿ ತಹಶೀಲ್ದಾರರ ಮೂಲಕ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಮತ್ತು ಕಲಾಪದ ಸಭಾಧ್ಯಕ್ಷರ ವಿರುದ್ಧ ಪ್ರತಿಭಟನಾ ನಿರತ ಪತ್ರಕರ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ಸಭಾಧ್ಯಕ್ಷರು ತೆಗೆದುಕೊಂಡ ನಿರ್ಧಾರ ಖಂಡನೀಯ. ಈ ಮೂಲಕ ಕಲಾಪಗಳನ್ನು ಪಾರದರ್ಶಕತೆಯಿಂದ ದೂರ ಮಾಡುವ ಸಂಚು ರೂಪಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೇ ರಾಜ್ಯ ಸರ್ಕಾರ ಮತ್ತು ಸಭಾಧ್ಯಕ್ಷರು ಖಾಸಗಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಗಣಪತಿ ಗಂಗೂಳಿ, ಉಪಾಧ್ಯಕ್ಷ ಸುಶೀಲೆಂದ್ರ ಕುಂದರಗಿ, ಬಸವರಾಜ ಹೂಗಾರ, ಕೇಶವ್ ಮೂರ್ತಿ, ಶಾಮುಲಾ ಪಟ್ಟಿ, ಪರಶುರಾಮ ತಹಶೀಲ್ದಾರ, ಗುರುರಾಜ ಹೂಗಾರ, ಕೃಷ್ಣ ದಿವಾಕರ್, ರಾಜು ಮುದ್ಗಲ್ ಇದ್ದರು.