ಹುಬ್ಬಳ್ಳಿ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಸಚಿವರು ಇನ್ನೊಬ್ಬ ಸಚಿವರ ವಿರುದ್ಧ ಹೇಳಿಕೆಗಳನ್ನು ಕೊಡುತ್ತಾರೆ. ಹೀಗೆ ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಎಲ್ಲ ಸಮಸ್ಯೆಗಳನ್ನು ಮರೆಮಾಚಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಈಗ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದೆ ಎನ್ನುವ ವಾತಾವರಣ ರಾಜ್ಯದಲ್ಲಿ ಮಾಯವಾಗಿದೆ. ಸರ್ಕಾರದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದಾರೆ. ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ಸರ್ಕಾರ ನಿಷ್ಕ್ರಿಯಗೊಂಡಂತೆ ಕಾಣುತ್ತಿದೆ ಎಂದು ಕುಟುಕಿದರು
ಜಿಂದಾಲ್ ಕಂಪನಿಗೆ ಜಮೀನು ಕೊಟ್ಟಿರುವ ವಿಷಯದಲ್ಲಿ ದೊಡ್ಡ ಪ್ರಮಾಣದ ಸಂಶಯಾಸ್ಪದ ವಾಸನೆ ಬರುತ್ತಿದೆ. ಇದಕ್ಕೆ ದೋಸ್ತಿ ಸರ್ಕಾರದಲ್ಲಿಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಪಾರದರ್ಶಕವಾಗಿ ಜಮೀನು ಕೊಟ್ಟಿಲ್ಲ. ಆದ್ದರಿಂದ ಜಿಂದಾಲ್ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಅಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆಯಬಾರದು ಎಂದು ಒತ್ತಾಯಿಸಿದರು.
ಹೆಚ್ ಕೆ ಪಾಟೀಲ್ ಮತ್ತು ಬಿ ಎಸ್ ಯಡಿಯೂರಪ್ಪ ಅವರು ಎತ್ತಿರುವ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ಕೊಡಲಿ. ಕಾಂಗ್ರೆಸ್‌ನಲ್ಲಿ ಅಯೋಮಯ ಪರಿಸ್ಥಿತಿಯಿದೆ. ಗುಂಪುಗಾರಿಕೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಿತಿ ಮೀರಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನರ ಗಮನ ಬೇರೆಡೆ ಸೆಳೆಯಲು ಗ್ರಾಮ ವಾಸ್ತವ್ಯ ಪ್ರಾರಂಭಿಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರು ಸೇರಿದಂತೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಿ ಸಂಸತ್ ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕಾರ ನೀಡುವಂತೆ ಕೋರಿದ್ದೇವೆ. ಇದಕ್ಕೆ ಆಡಳಿತ ಪಕ್ಷದ ಸಹಕಾರವೂ ಬೇಕು ಎಂದು ಸೋನಿಯಾ ಗಾಂಧಿ ಅವರು ಮನವಿ ಮಾಡಿದ್ದಾರೆ ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ಪ್ರಮುಖ ವಿಧೇಯಕಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಚರ್ಚೆಗೂ ಸಿದ್ಧ. ಸರ್ಕಾರ ರಚನೆಯಾದ ಬಳಿಕ ಜನರ ಹಿತ ಕಾಯುವುದೇ ಅದರ ಮುಖ್ಯ ಉದ್ದೇಶವಾಗಿರುತ್ತದೆ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್-ಸಬ್ ವಿಶ್ವಾಸ್ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಜೂನ್ 17, 18 ರಂದು ಸಚಿವರಿಗೆ ಪ್ರಮಾಣ ವಚನ ಬೋಧನೆ, 19ರಂದು ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.