ಧಾರವಾಡ: ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ನಾಡಧ್ವಜ ಸುಟ್ಟ ವಿಚಾರಕ್ಕೆ ಸಚಿವ ಜಗದೀಶ್ ಪ್ರತಿಕ್ರಿಯಿಸಿ, ಶಿವಸೇನೆಯ ಸರ್ಕಾರ ಬಂದ ಮೇಲೆ ಗಡಿ ವಿಚಾರವಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಷ್ಟು ದಿನ ಗಡಿಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರು ಒಂದಾಗಿದ್ದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವುದರಲ್ಲಿ ಯಾವುದೇ ಮಾತಿಲ್ಲ. ಸುವರ್ಣ ಸೌಧ ಕೂಡಾ ಕಾರ್ಯನಿರ್ವಹಣೆ ಮಾಡ್ತಾ ಇದೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಾಗರಿಕರಿಗೂ ನಾವು ಕನ್ನಡಿಗರು ಎನ್ನುವ ಭಾವನೆಯಿದೆ. ಅದಕ್ಕೆ ಕಿಚ್ಚು ಹಚ್ಚುವ ಕಾರ್ಯ ಯಾರಾದ್ರು ಮಾಡಿದ್ರೆ ಅದು ಶಿವಸೇನೆಯ ಉದ್ಧವ್ ಠಾಕ್ರೆ ಮಾತ್ರ. ಅವರು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಅಲ್ಲದೇ ಶಿವಸೇನೆ ಭಾಷಾ ಸಮಸ್ಯೆಯನ್ನು ಪ್ರಚೋದಿಸುವ ಬದಲು ಉತ್ತಮವಾಗಿ ಆಡಳಿತ ಮಾಡಿಕೊಂಡು ಹೋದ್ರೆ ಒಳ್ಳೆಯದು ಎಂದರು.
ಮಹಾದಾಯಿ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ವಿಚಾರವನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇದರಲ್ಲಿ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್ನವರಿದ್ದಾಗ ಮೂವತ್ತು ನಲವತ್ತು ವರ್ಷ ಬಗೆಹರಿಸಲು ಆಗಿಲ್ಲ. ನಾವು ಬಗೆಹರಿಸಲು ಮುಂದಾದ್ರೆ ಹೋರಾಟ ಮಾಡಿ, ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ಅವರ ಸ್ವಂತದ ಜಾಗ ಇದ್ದರೂ ಸಹ ಸರ್ಕಾರಿ ಜಾಗದಲ್ಲಿ ಏಸು ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅವರು ಸರ್ಕಾರದ ಭಾಗವೇ ಅಲ್ಲ, ಮಂತ್ರಿಯೂ ಅಲ್ಲ. ಅದೇ ಒಂದು ಪ್ರಶ್ನೆ ಇದೆ. ಇಂತಹದರಲ್ಲಿ ಅವರು ಏಸು ಭಕ್ತರು ಯಾವಾಗ ಆದ್ರು ಎನ್ನುವುದೇ ಗೊತ್ತಿಲ್ಲ ಎಂದರು. ಏಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರಕ್ಕೆ ಕೇಳಿಯೆ ಇಲ್ಲ. ಕೇಳಲಾರದೆ ಹೋಗಿ ಅಲ್ಲಿ ನಿರ್ಮಾಣ ಮಾಡುತ್ತೇನೆ ಎಂದರೆ ಇದಕ್ಕೆ ಅರ್ಥ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಡಿಕೆಶಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ ವಿಷಯ ಅವರ ಕೀಳುಭಾವನೆ ಬಗ್ಗೆ ಹೇಳುತ್ತೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಜಧಾನಿ ಆಗಿದ್ರೆ ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಇವರ ಈ ನಿಲುವಿನಿಂದಲೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಪ್ರಾದೇಶಿಕ ತಾರತಮ್ಯ ಬಂದಿರುವುದು ಎಂದು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮತ್ತು ರೇಣುಕಾಚಾರ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ರೇಣುಕಾಚಾರ್ಯರ ವೈಯಕ್ತಿಕ ಹೇಳಿಕೆಗಳಿಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ.