ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು, ಬಿಜೆಪಿ ಶಾಸಕ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ, ಶೆಟ್ಟರ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಹುಬ್ಬಳ್ಳಿ ಏರ್ಪೋರ್ಟ್ನಿಂದ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪೂರಿ ತಿಳಿಸಿದ್ದಾರೆ.
"ಜಗದೀಶ್ ಶೆಟ್ಟರ್ ಅವರಿಗೆ ವಿಶೇಷ ವಿಮಾನ ಬುಕ್ ಮಾಡಲಾಗಿದೆ. ಶೆಟ್ಟರ್ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗಾಗಿ ಅವರನ್ನು ನಾವು ಬೆಂಗಳೂರಿಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದೇವೆ" ಎಂದು ಅವರು ತಿಳಿಸಿದರು.
"ನೀವು ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಇರಿ. ಅಲ್ಲಿಗೆ ಬೆಂಗಳೂರಿನಿಂದ ಸ್ಪೆಷಲ್ ವಿಮಾನ ಬರಲಿದೆ. ಜಗದೀಶ್ ಶೆಟ್ಟರ್ ಸಾಹೇಬರು ಆ ವಿಮಾನದ ಮೂಲಕ ಬೆಂಗಳೂರಿಗೆ ಹೋಗಲಿದ್ದಾರೆ. ಅಲ್ಲಿ ಡಿ.ಕೆ. ಶಿವಕುಮಾರ್ ಸಾಹೇಬರು, ಸಿದ್ದರಾಮಯ್ಯ, ಎಂ.ಬಿ. ಪಾಟೀಲರು ಸೇರಿದಂತೆ ಎಲ್ಲ ಗೌರವಾನ್ವಿತ ಪದಾಧಿಕಾರಿಗಳು ಶೆಟ್ಟರ್ ಅವರನ್ನು ಬರಮಾಡಿಕೊಳ್ಳುತ್ತಾರೆ. ಮುಂದೆ ಅವರು ಯಾವ ಸಮಯದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಬೇಕೆಂದು ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಡಿಕೆಶಿ ಹಾಗೂ ಸುರ್ಜೇವಾಲಾ ಮಾತನಾಡಿದ್ದಾರೆ. ಮುಂದೆ ಅವರ ತೀರ್ಮಾನದಂತೆ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ. ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ರಜತ್ ಉಳ್ಳಾಗಡ್ಡಿಯವರನ್ನೂ ಕೂಡಾ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ" ಎಂದರು.
ರಾಜೀನಾಮೆ ಬಳಿಕ ಜಗದೀಶ್ ಶೆಟ್ಟರ್ ಹೇಳಿದ್ದೇನು?: "ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ರಾಜೀನಾಮೆ ಕುರಿತು ಬಿಜೆಪಿ ಹೈಕಮಾಂಡ್ ಸಂಪರ್ಕಿಸಿ, ಮಾತನಾಡಿದ್ದಾರೆ. ಆದರೆ ಟಿಕೆಟ್ ನೀಡದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ" ಎಂದು ಶೆಟ್ಟರ್ ಹೇಳಿದರು.
"ಶಾಸಕನಾಗಿ ಕೆಲಸ ಮಾಡುವುದು ಬೇಡ ಎನ್ನಲು ನನ್ನಲ್ಲಿರುವ ಸಣ್ಣ ಮಿಸ್ಟೇಕ್ ತೋರಿಸಲಿ. ಕಪ್ಪು ಚುಕ್ಕೆ, ಅನಾರೋಗ್ಯ, ಯಾವುದೋ ಸಿಡಿ, ರೌಡಿಶೀಟರ್ ಯಾವುದೂ ಇಲ್ಲ. 30 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷವೂ ನನಗೆ ಸಹಾಯ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಲು ಸಹಕರಿಸಿದ್ದೇನೆ. ಅಭ್ಯರ್ಥಿಗಳು ಟಿಕೆಟ್ ಸಿಗದೇ ಹೋದಾಗ ಪ್ರಚಾರ ಮಾಡಿ, ಹಳ್ಳಿಹಳ್ಳಿಗಳಲ್ಲಿ ಪಕ್ಷ ಬಲಿಷ್ಠವಾಗಿಸಿದ್ದೇನೆ. ಆದರೆ ಈಗ ಮೂಲಬಿಜೆಪಿಯಲ್ಲಿ ಇದ್ದವರನ್ನು ಹೊರಹಾಕಲಾಗುತ್ತಿದೆ. ನಮ್ಮ ಮನೆಯಿಂದ ನಮ್ಮನ್ನು ಹೊರಹಾಕಲಾಗುತ್ತಿದೆ" ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ನಮ್ಮ ಮನೆಯಿಂದಲೇ ನಮ್ಮನ್ನು ಹೊರಹಾಕಿದಂತಾಯಿತು'.. ರಾಜೀನಾಮೆ ಬಳಿಕ ಶೆಟ್ಟರ್ ಹೀಗಂದ್ರು