ಧಾರವಾಡ: ಮದ್ಯ ಮಾರಾಟ ನಿಷೇಧ ಕುರಿತು ಕೆಲವರು ಮಾಡಿರುವ ಆಗ್ರಹ ಹಾಗೂ ಕೊಟ್ಟಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‍ಡೌನ್ ಮುಂಚೆಯೇ ಮದ್ಯ ಮಾರಾಟ ಇತ್ತಲ್ಲ, ಆಗ ಯಾಕೆ ನಿಷೇಧದ ಬಗ್ಗೆ ಚರ್ಚೆ ಆಗಲಿಲ್ಲ?. ಇಂತಹ ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಸರ್ಕಾರ ನಡೆಸುವುದು ಬೇರೆ, ಅಭಿಪ್ರಾಯ ಹೇಳುವುದು ಬೇರೆ, ಎಲ್ಲೆಲ್ಲಿ ಅಭಿಪ್ರಾಯ ಹೇಳಬೇಕೋ ಅಲ್ಲಿ ಹೇಳುತ್ತೇವೆ. ವೈಯಕ್ತಿಕವಾಗಿ ಜನರೇ ಮದ್ಯ ಬೇಡ ಎನ್ನಬೇಕು. ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್‍ಡೌನ್ ಯಶಸ್ಸು ಆಗುತ್ತದೆ ಎಂದು ತಿಳಿಸಿದರು.
ಹಾಗೆಯೇ ಜನ ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಿ. ಸಾವಿರ ಜನ ತೆಗೆದುಕೊಳ್ಳಲಿ, ಲಕ್ಷ ಜನ ಸ್ವಯಂ ನಿರ್ಧಾರ ತೆಗೆದುಕೊಳ್ಳಲಿ. ಎಲ್ಲವನ್ನೂ ಸರ್ಕಾರವೇ ಮಾಡಬೇಕಾ? ಎಂದು ಪ್ರಶ್ನಿಸಿದ ಸಚಿವರು, ಕುಡುಕರಿಗೆ ಮಠಕ್ಕೆ ಪ್ರವೇಶ ಇಲ್ಲ ಎಂದು ಮಠಾಧೀಶರು ಹೇಳಲಿ. ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ನಿರ್ಧಾರ ತೆಗೆದುಕೊಳ್ಳಲಿ ಎಂದರು.
ಬಿಹಾರ ಹಾಗೂ ಗುಜರಾತ್ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಒಂದು ಸಲ ಬಿಹಾರ ಹಾಗೂ ಗುಜರಾತ್ಗೆ ಹೋಗಿ ನೋಡಿ ಬನ್ನಿ, ಅಲ್ಲಿ ಏನು ನಡೆಯುತ್ತದೆ ಎಂದು ಇಲ್ಲಿ ಡಿಬೇಟ್ ಮಾಡುವುದಲ್ಲ ಎಂದು ಬಿಹಾರ ಹಾಗೂ ಗುಜರಾತ್ನಲ್ಲಿ ಮದ್ಯ ಮಾರಾಟ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.