ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಯವರೆಲ್ಲ ಮಹಾನ್ ಭ್ರಷ್ಟರು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಹ್ಲಾದ್ ಜೋಶಿ ಹಾಗೂ ವಿನಯ್ ಕುಲಕರ್ಣಿ ಮಹಾನ್ ಭ್ರಷ್ಟರಾಗಿದ್ದಾರೆ. ಜೋಶಿ ಹಾಗೂ ಶೆಟ್ಟರ್ ತಮ್ಮ ಅಧಿಕಾರದ ಸಮಯದಲ್ಲಿ ಹುಬ್ಬಳ್ಳಿಯಲ್ಲಿರುವ ಜಿಮ್ಖಾನಾ ಕ್ಲಬ್ನ ಸುಮಾರು 7 ಎಕರೆ ಜಾಗವನ್ನು ಕಬಳಿಸಿದ್ದಾರೆ. ಅದೇ ರೀತಿ ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಸಿದ್ದರಾಮಯ್ಯ ಜೊತೆ ಸೇರಿಕೊಂಡು ಗಣಿ ಉದ್ಯಮದಿಂದ ಸಾಕಷ್ಟು ಲೂಟಿ ಮಾಡಿದ್ದಾರೆ. ಹೀಗಾಗಿ ಇಲ್ಲಿ ಭ್ರಷ್ಟರನ್ನು ಜನರು ಬೆಂಬಲಿಸಬಾರದು ಎಂದು ಹೇಳಿದರು.
ಅದೇ ರೀತಿ ಬಿಜೆಪಿಯಲ್ಲಿರುವ ಅಮಿತ್ ಶಾ ಮೇಲೆ ಕೊಲೆಯ ಆರೋಪ ಇದೆ. ಅಂತವರು ಈಗ ನಮ್ಮ ದೇಶವನ್ನು ಆಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಕೇವಲ ಸುಳ್ಳು ಹೇಳುತ್ತ, ಜನರಿಗೆ ದಾರಿ ತಪ್ಪಿಸುವ ಒಂದು ಕಾರ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೀಗಾಗಿ ಜನರು ಎಚ್ಚೆತ್ತುಕೊಂಡು ಸರಿಯಾದ ವ್ಯಕ್ತಿಯನ್ನು ನೋಡಿ ಯಾವುದೇ ಪಕ್ಷವನ್ನು ನೋಡದೆ ಸರಿಯಾಗಿ ಸಾರ್ವಜನಿಕರಿಗೆ ಸ್ಪಂದಿಸುವವರಿಗೆ ತಮ್ಮ ಮತ ನೀಡಬೇಕು. ಧಾರವಾಡ ಕ್ಷೇತ್ರದಿಂದ ಎಸ್ಯುಸಿಐ ಪಕ್ಷದಿಂದ ನಾಗರಾಜ್ ಬಡಿಗೇರ್ ಎಂಬ ಸಾಮಾನ್ಯ ಅಭ್ಯರ್ಥಿ ನಿಂತಿದ್ದಾರೆ. ಅವರಿಗೆ ನಿಮ್ಮ ಮತ ನೀಡಿದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗುತ್ತದೆ ಎಂದು ಅವರು ಹೇಳಿದರು.