ಧಾರವಾಡ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಬಿ ಸಭೆಯಲ್ಲಿ ಶಾಸಕ ಜಗದೀಶ್ ಶೆಟ್ಟರ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ಶೆಟ್ಟರ್ ಮಾತನಾಡುತ್ತಿದ್ದಾಗ ಅವರ ಹೇಳಿಕೆಗೆ ಪ್ರತಿಯಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳ ಅತಿಕ್ರಮಣದಿಂದ ಜನ ಓಡಾಡಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಕ್ಕಳು ಕೂಡ ಅತಿಕ್ರಮಣ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ. ನಾನು ದಾಖಲೆ ಕೂಡ ಕೊಡುತ್ತಿದ್ದೇನೆ. ಇಷ್ಟೆಲ್ಲಾ ಆದರೂ ಅತಿಕ್ರಮಣ ತೆರವುಗೊಳಿಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಹಾಗೆಂದರೆ ಯಾಕಾದರೂ ಸರ್ಕಾರ ಇರಬೇಕು ಎಂದು ಶೆಟ್ಟರ್ ಆರೋಪಿಸಿದರು. ಅದಕ್ಕೆ ಸಿಡಿಮಿಡಿಗೊಂಡ ಆರ್.ವಿ.ದೇಶಪಾಂಡೆ ಏಕಾಏಕಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 48 ಗಂಟೆಯೊಳಗೆ ಅತಿಕ್ರಮಣ ತೆರವುಗೊಳಿಸುವಂತೆ ಗಡುವು ನೀಡಿದರು.
ಕೇವಲ ಚುನಾವಣೆಗಾಗಿ ಪಾಲಿಕೆ ಆಯುಕ್ತರನ್ನು ನೇಮಕ ಮಾಡಲಾಗಿದೆಯೋ ಅಥವಾ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂರ್ಣ ಅವಧಿಗೆ ನೇಮಕ ಮಾಡಲಾಗಿದೆಯೋ ಎಂದು ಆರ್.ವಿ.ದೇಶಪಾಂಡೆ ಅವರನ್ನು ಶೆಟ್ಟರ್ ಪ್ರಶ್ನಿಸಿದರು. ಕಮರಿಪೇಟೆಯಿಂದ ಉಣಕಲ್ ಕ್ರಾಸ್ವರೆಗೆ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ರಸ್ತೆ ಅಗಲೀಕರಣಕ್ಕೆ ಗಮನಕೊಡಿ. ಇದಕ್ಕಾಗಿ ಅಲ್ಲಿರುವ ಅಂಗಡಿಗಳಿಗೆ ನೋಟಿಸ್ ಕೊಡಿ ಎಂದು ಪಾಲಿಕೆ ಆಯುಕ್ತರಿಗೆ ದೇಶಪಾಂಡೆ ಸೂಚನೆ ನೀಡಿದರು.