ಹುಬ್ಬಳ್ಳಿ: ಸಿದ್ದರಾಮಯ್ಯನವರು ಧಾರವಾಡ ಜಿಲ್ಲೆಯ ಜನರ ಕುಡಿಯುವ ನೀರಿಗೆ ಕಲ್ಲು ಹಾಕಿರುವ ಕೆಟ್ಟ ರಾಜಕಾರಣಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾವಿಗೆ ಹನ್ನೆರಡು ವರ್ಷ ದ್ವೇಷವಾದರೆ ಸಿದ್ದರಾಮಯ್ಯ ಅವರಿಗೆ ಸಾಯುವವರೆಗೂ ದ್ವೇಷ. ಕಾಂಗ್ರೆಸ್ ಚೇಲಾಗಳಿಂದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಸುವ ಕೆಲಸ ಮಾಡಿಸುತ್ತಿದ್ದಾರೆ. ಅವರು ಲೈಫಿನಲ್ಲಿಯೇ ಮುಖ್ಯಮಂತ್ರಿ ಆಗುವುದಿಲ್ಲ. ರಾಜಕೀಯ ದ್ವೇಷ ಮಾಡಲು ಕೊನೆ ಎಂಬುದು ಇರಬೇಕು. ವೀರಶೈವರಿಗೆ ದೊಡ್ಡಮಟ್ಟದ ಅನ್ಯಾಯ ಮಾಡಿರುವುದು ಕಾಂಗ್ರೆಸ್ನವರು ಎಂದು ಗಂಭೀರ ಆರೋಪ ಮಾಡಿದರು.
ನೂರಾರು ಡಿಕೆಶಿ, ನೂರಾರು ಸಿದ್ದರಾಮಯ್ಯ ಬಂದರೂ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಕುಂದಗೋಳ ಕ್ಷೇತ್ರಕ್ಕೆ ಬಿಜೆಪಿ ಸಾಕಷ್ಟು ಅನುದಾನ ನೀಡಿದೆ. ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ವ್ಯವಸ್ಥಿತವಾಗಿ ಪೂರ್ಣಗೊಂಡಿರುವುದು ಬಿಜೆಪಿಯ ಕೊಡುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು ಇಪ್ಪತ್ತರಿಂದ ಮುವತ್ತು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕುಂದಗೋಳದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಗೋಡ್ಸೆ ಸಿದ್ಧಾಂತ ಒಪ್ಪಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಯಾವುದೇ ಗೋಡ್ಸೆ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ನಾವೇಲ್ಲ ಗೋಡ್ಸೆ ವಿರೋಧಿಗಳು ಎಂದಿದ್ದಾರೆ.