ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ರೈಡ್ ಮಾದರಿಯಲ್ಲೇ ಕುಂದಗೋಳ ಉಪಚುನಾವಣೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಉಳಿದುಕೊಂಡಿದ್ದ ಕೊಠಡಿಗಳನ್ನು ಪರಿಶೀಲಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಮಂಡ್ಯ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ಸಾಕಷ್ಟು ಜಾಗಗಳಲ್ಲಿ ತಪಾಸಣೆ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದರು. ಹಣ, ಆಸ್ತಿ ಸಿಗದಿದ್ದರೂ ಕೆಲವು ಕಡೆ ಒಳ್ಳೆ ಕುಳಗಳೇ ಬಲೆಗೆ ಬಿದ್ದಿದ್ದವು.
ಆದರೆ ಈ ಬಾರಿ ತೆರಿಗೆ ಅಧಿಕಾರಿಗಳು ಏನೂ ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ. ಹುಬ್ಬಳ್ಳಿಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಂಗಿರುವ ಗೋಕುಲ ರಸ್ತೆಯ ಡೆನಿಸನ್ಸ್ ಹೊಟೇಲ್ ಹಾಗೂ ಸಚಿವ ಡಿಕೆ ಶಿವಕುಮಾರ್ ತಂಗಿರುವ ಕಾಟನ್ ಕೌಂಟಿ ಕ್ಲಬ್ ಕೊಠಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನು ಸಚಿವ ಜಮೀರ್ ಅಹ್ಮದ್ ಖಾನ್, ಆರ್.ವಿ. ದೇಶಪಾಂಡೆ, ಎಂಎಲ್‌ಸಿ ನಾಸೀರ್ ಅಹ್ಮದ್, ಸಂತೋಷ್ ಲಾಡ್, ಎಮ್.ಟಿ.ಬಿ ನಾಗರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ವಾಸ್ತವ್ಯ ಹೂಡಿರುವ ಕೊಠಡಿಗಳನ್ನೂ ತಲಾಶ್ ನಡೆಸಿ ಹೊಟೇಲ್ ದಾಖಲೆಗಳನ್ನು ವಶಕ್ಕೆ ಪಡೆದರು.
ಗೋವಾ ಮತ್ತು ಬೆಳಗಾವಿ ಭಾಗದ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ವಾರ್ಡ್‌ರೋಬ್, ಟೇಬಲ್, ಕಾಟ್‌ಗಳನ್ನೂ ಬಿಡದೆ ಪರಿಶೀಲನೆ ಮಾಡಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳ ಕೈಗೆ ಏನಾದ್ರು ಸಿಕ್ಕಿದ್ಯಾ ಅನ್ನೋ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಒಟ್ಟಾರೆ, ಲೋಕಸಭೆ ಚುನಾವಣೆ ವೇಳೆ ಶುರುವಾದ ಐಟಿ ದಾಳಿ ಮಿನಿ ಸಮರದಲ್ಲೂ ಮುಂದುವರಿದಿದೆ.