ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯದಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಬೇಸರ ತಂದಿದೆ. ಅವರಿಗೆ ಇನ್ನು ರಾಜಕಾರಣ ಮಾಡುವ ಶಕ್ತಿ ಇದೆ. ಅವರಿಂದ ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತ್ತು. ಏಕಾಏಕಿ ಈಗ ಅವರು ನಿವೃತ್ತಿಯಾಗಿದ್ದು, ನನಗೆ ಬಹಳ ಬೇಸರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದ್ರು. ಆದರೆ ಬಿಜೆಪಿಯವರು ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅಲ್ಲದೇ ಹೈಕಮಾಂಡ್ ಅವರಿಗೆ ಸಾಕಷ್ಟು ನೋವು ನೀಡಿದೆ. ಅದೆಲ್ಲ ನುಂಗಿಕೊಂಡು ಪಾರ್ಟಿ ಪರವಾಗೇ ಮಾತನಾಡ್ತಾರೆ. ಇವತ್ತು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಆದರೆ, ಅದರಿಂದ ನಮ್ಮ ಪಕ್ಷಕ್ಕೆ ನಷ್ಟ ಇಲ್ಲ ಎಂದು ತಿಳಿಸಿದರು.
ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರಧ್ವಜ ತಯಾರಿ: ಚರಕ ದೇಶದ ಆಸ್ತಿ, ಗಾಂಧೀಜಿ ದೇಶಕ್ಕೆ ಬಳುವಳಿಯಾಗಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿ ಸರ್ಕಾರ ರಾಷ್ಟ್ರಧ್ವಜವನ್ನು ಪಾಲಿಸ್ಟರ್ ಬಟ್ಟೆಗಳಿಂದ ಮಾಡಲು ಅನುಮತಿ ನೀಡಿದೆ. ಇದು ದೇಶಕ್ಕೆ ಅವಮಾನ. ಪ್ರತಿ ಮನೆಯಲ್ಲಿ ರಾಷ್ಟ್ರದ ಬಾವುಟ ಹಾಕುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಖಾದಿ ರಾಷ್ಟ್ರಧ್ವಜ ಹಾರಿಸಬೇಕು: ಸರ್ಕಾರ ಕೂಡಲೇ ರಾಷ್ಟ್ರಧ್ವಜ ತಯಾರಿಕೆ ಕುರಿತಾದ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು. ಬಿಜೆಪಿ ಸರ್ಕಾರ ಪ್ರತಿ ಮನೆಯಲ್ಲಿ ಖಾದಿ ರಾಷ್ಟ್ರಧ್ವಜ ಹಾರಿಸಬೇಕೆಂದು ಹೇಳಿದರೇ ಮೆಕ್ ಇನ್ ಇಂಡಿಯಾ ಘೋಷಣೆಗೆ ಗೌರವ ಬರುತಿತ್ತು. ಇದೀಗ ಸ್ವದೇಶ ಬಿಟ್ಟು ವಿದೇಶದ ಚಿಂತನೆ ಖಂಡನೀಯ ಎಂದರು.
ಇದನ್ನೂ ಓದಿ: ಪುತ್ರನಿಗೆ ಬಿಎಸ್ವೈ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರ ನಮಗೇಕೆ: ಸಿದ್ದರಾಮಯ್ಯ ಪ್ರಶ್ನೆ
ಕಾಂಗ್ರೆಸ್ ನಾಯಕ ರಮೇಶ ಕುಮಾರ್ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇವೆ. ಅವರು ಸೋನಿಯಾ ಗಾಂಧಿ ವಿಚಾರವಾಗಿ ತಪ್ಪು ಮಾತನಾಡಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ. ನೆಹರೂ ಕುಟುಂಬದ ತ್ಯಾಗ, ಸಾಧನೆಯನ್ನು ಹೇಳಿದ್ದಾರೆ. 75 ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ಆಗಸ್ಟ್ 15 ರಂದು ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದಿಂದ ಸ್ವತಂತ್ರ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಕ್ಷಾತೀತವಾಗಿ ಭಾಗಿಯಾಗಲು ಕರೆ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.