ಹುಬ್ಬಳ್ಳಿ: ಐಪಿಎಸ್ ಅಧಿಕಾರಿಗಳ ಶೀತಲ ಸಮರ ಹೊಸ ತಿರುವು ಪಡೆದುಕೊಂಡಿದೆ. ಡಿಸಿಪಿ ಕೃಷ್ಣಕಾಂತ ಅವರಿಗೆ ಕಮೀಷನರ್ ಆರ್. ದಿಲೀಪ್ ಇದೀಗ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಮೊನ್ನೆಯಷ್ಟೇ ಪೊಲೀಸ್ ಕಮೀಷನರ್ ಆರ್. ದಿಲೀಪ್ ವಿರುದ್ಧ ಡಿಸಿಪಿ ಕೃಷ್ಣಕಾಂತ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದರು. ದಿಲೀಪ್ ಅವರು ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕೃಷ್ಣಕಾಂತ್ ಪತ್ರದಲ್ಲಿ ದೂರಿದ್ದರು. ಇದರ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೂ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ದಿಲೀಪ್, ಒಂದಷ್ಟು ಪ್ರಶ್ನೆಗಳನ್ನು ಕೇಳಿ ಡಿಸಿಪಿ ಅವರಿಗೆ ನೋಟಿಸ್ ನೀಡಿದ್ದಾರೆ.
ಅಕ್ಟೋಬರ್ 2ರಂದು ಮೂರು ಬಾರಿ ಫೋನ್ ಮೂಲಕ ಸಂಪರ್ಕಿಸಿದ್ದೀರಿ. ಆಗ ಒಮ್ಮೆಯೂ ಭೇಟಿಯಾಗುವ ವಿಷಯ ತಿಳಿಸಿಲ್ಲ. ಅಲ್ಲದೇ ಭೇಟಿ ವಿಚಾರದ ಕುರಿತು ಪ್ರಸ್ತಾಪ ಮಾಡಿಲ್ಲ. ಹಾಗಿದ್ದಾಗ ಒಮ್ಮೆಲೆ ಯಾಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದೀರಿ? ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ನಾವು ಸಾಕಷ್ಟು ಬಾರಿ ಭೇಟಿಯಾಗಿ, ಚರ್ಚೆ ಕೂಡ ನಡೆಸಿದ್ದೇವೆ. ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೀರ್ಮಾನಿಸಿದ್ದೇವೆ. ನಮ್ಮಿಬ್ಬರ ನಡುವೆ ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಭೇಟಿಗೆ ನಿರಾಕರಣೆ ಆಗಿದೆ ಎಂದು ಪತ್ರದಲ್ಲಿ ಯಾಕೆ ಹೇಳಿದ್ದೀರಿ? ಎನ್ನುವ ಪ್ರಶ್ನೆಗಳನ್ನು ಕಮಿಷನರ್ ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರ ನಡುವಿನ ಮುಸುಕಿನ ಗುದ್ದಾಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.