ಹುಬ್ಬಳ್ಳಿ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿರುವ ವಿಶ್ವನಾಥ ಸಜ್ಜನರ್ ಸಾಹಸದಿಂದ ಗಂಡು ಮೆಟ್ಟಿದ ನಾಡಿಗೆ ಇನ್ನಷ್ಟು ಕೀರ್ತಿ ಹೆಚ್ಚಿದೆ.
ಸಜ್ಜನರ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅವರ ಸಂಬಂಧಿಗಳು, ಆಪ್ತರು ಸಜ್ಜನರ್ ಮನೆಗೆ ಆಗಮಿಸಿ ಶುಭಕೋರುತ್ತಿದ್ದಾರೆ. ಮನೆಯಿಂದಲೇ ವಿಶ್ವನಾಥ್ ಸಜ್ಜನರ್ ಸಾಹಸಕ್ಕೆ ಹೆಚ್ಚಿನ ಪ್ರಶಂಸೆ ಹಾಗೂ ಕರ್ತವ್ಯ ಪ್ರೋತ್ಸಾಹ ದೊರೆತಿರುವುದು ಶ್ಲಾಘನೀಯ. ಇತಿಹಾಸದಲ್ಲಿಯೇ ಇಂತಹ ಮಹತ್ವದ ಕರ್ತವ್ಯ ನಿರ್ವಹಿಸಿರುವ ಸಜ್ಜನರ್ ನಮ್ಮ ಹುಬ್ಬಳ್ಳಿಯವರು ಎಂಬುವುದು ನಮ್ಮೆಲ್ಲರ ಹೆಮ್ಮೆ.
ತಂದೆ ಚನ್ನಪ್ಪ ಸಜ್ಜನರ್, ತಾಯಿ ಗಿರಿಜಮ್ಮ ಸಜ್ಜನರ್. ಇವರಿಗೆ ಮೂರು ಮಕ್ಕಳು. ಇವರಲ್ಲಿ ಮೂರನೇ ಮಗನೇ ವಿಶ್ವನಾಥ ಸಜ್ಜನರ್. ಇವರ ಇನ್ನೊಬ್ಬ ಸಹೋದರ ಪ್ರಕಾಶ್ ಸಜ್ಜನರ ಹುಬ್ಬಳ್ಳಿಯಲ್ಲಿ ವೈದ್ಯರಾಗಿದ್ದು, ಪಗಡಿ ಓಣಿಯಲ್ಲಿ ಆಸ್ಪತ್ರೆ ಹೊಂದಿದ್ದಾರೆ.
ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡ ವಿಶ್ವನಾಥ್ ಸಜ್ಜನರ್ ತಮ್ಮ ಚಿಕ್ಕಮ್ಮರಾದ ಮಲ್ಲಮ್ಮ ಸಜ್ಜನರ್ ಅವರ ಮಡಿಲಲ್ಲಿ ಬೆಳೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ- ಲೈನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಜಯನಗರ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿ, ಪಿಯುಸಿ-ಪದವಿ ವಿದ್ಯಾಭ್ಯಾಸವನ್ನು ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜು ವಿದ್ಯಾನಗರ ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಮುಗಿಸಿದ ಅವರು, ಹೈದರಾಬಾದ್ನಲ್ಲಿ ಐಎಎಸ್ ಕೋಚಿಂಗ್ ಪಡೆದಿದ್ದಾರೆ. 1996 ರಲ್ಲಿ ಯುಪಿಎಸ್‌ಸಿ ತೇರ್ಗಡೆ ಹೊಂದಿ ಡಿವೈಎಸ್‌ಪಿ ಆಗಿ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವಂದಲಾದಿಂದ ವೃತ್ತಿ ಜೀವನ ಆರಂಭ ಮಾಡಿದರು.