ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಉತ್ತರಕರ್ನಾಟಕದ ಅಭಿವೃದ್ಧಿಗೆ ಹಾಗೂ ಕೈಗಾರಿಕೋದ್ಯಮ ಸ್ಥಾಪನೆಗೆ ₹1ಲಕ್ಷ ಕೋಟಿಗೂ ಹೆಚ್ಚು ಬಂಡವಾಳದ ಜೊತೆಗೆ ಉದ್ಯಮಿಗಳು ಮುಂದೆ ಬಂದಿರುವುದು ನಿಜಕ್ಕೂ ವಿಶೇಷ.
ಐತಿಹಾಸಿಕ ದಾಖಲೆಯ ಸಮಾವೇಶವಿದು. ಬೆಂಗಳೂರು ಮಾದರಿ ಎರಡು ಹಾಗೂ ಮೂರನೇ ಸ್ತರದ ನಗರಗಳ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಉತ್ತರಕರ್ನಾಟಕದ ಅಭಿವೃದ್ಧಿಗಾಗಿ ಕೈಗಾರಿಕೋದ್ಯಮ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಸುವವರಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದರು. 40 ಕೈಗಾರಿಕೆಗಳ ಸ್ಥಾಪನೆ ಜೊತೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆ ತಲುಪುವ ಕೆಲಸ ಮಾಡಬೇಕಿದೆ. ಈ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಶ್ರಮಿಸುತ್ತಿವೆ ಎಂದು ತಿಳಿಸಿದರು.
ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೈಗಾರಿಕೆಗಳು ಹಾಗೂ ಉದ್ಯಮಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದವು. ನಾನು ಕೈಗಾರಿಕಾ ಸಚಿವನಾದ ಮೇಲೆ ಅವುಗಳನ್ನ 2ನೇ ಹಂತದ ನಗರಗಳಿಗೂ ವಿಸ್ತರಿಸುವ ಕಾರ್ಯ ಮಾಡುತ್ತಿರುವೆ. ನಮ್ಮ ಕೆಲಸ ಇದರಲ್ಲಿ ತೃಪ್ತಿ ತಂದಿದೆ ಎಂದರು.
ಸರ್ಕಾರ ಉದ್ಯಮಿಗಳಿಗೆ ಆಹ್ವಾನ ನೀಡಿದ್ರೆ ಅವರು ಬೆಂಗಳೂರಿನಲ್ಲಿ ಇನ್ವೆಸ್ಟ್ ಮಾಡ್ತೀವಿ ಅಂತಿದ್ರು. ಆದರೆ, ಅದನ್ನು ನಾವು ಬೇರೆ ನಗರಗಳಿಗೂ ವಿಸ್ತರಣೆ ಮಾಡುತ್ತಿದ್ದೇವೆ. ಬೇಕಾದ ಎಲ್ಲ ಸಹಕಾರವನ್ನ ನಮ್ಮ ಸರ್ಕಾರ ನೀಡಲಿದೆ. ಈ ಸಮಾವೇಶಕ್ಕಾಗಿ ನಾವು ಬಹಳ ಪ್ರಯತ್ನ ಮಾಡಿದ್ದೇವೆ. ದೇಶದ ನಾನಾ ರಾಜ್ಯಗಳಲ್ಲಿ ರೋಡ್ ಶೋ ಮಾಡಿ ಕೈಗಾರಿಕೋದ್ಯಮಗಳಿಗೆ ಆಹ್ವಾನ ನೀಡಿದ್ದೆವು. ಹೀಗಾಗಿ ಇಂದು ದೇಶ-ವಿದೇಶಗಳಿಗಳಿಂದ ಹೂಡಿಕೆದಾರರು ಆಗಮಿಸಿದ್ದಾರೆ ಎಂದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಸಾವಿರಾರು ಕೋಟಿ ಬಂಡವಾಳ ಹರಿದು ಬಂದಿದೆ. ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದಂತೆ ನೂರಾರು ಉದ್ಯಮಿಗಳು ಬಂಡವಾಳ ಹೂಡಲು ಉಸ್ತುಕರಾದರು. ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿಯೇ ಒಪ್ಪಂದ ಮಾಡಿಕೊಡಲಾಯಿತು. ಸಿಎಂ ಸಮ್ಮುಖದಲ್ಲಿ ಮೆಹ್ತಾ ಎಕ್ಸ್‌ಪೋಟ್೯, ಐಒಸಿಎಲ್, ಪ್ರಭಂಜನ್ ಇಂಡಸ್ಟ್ರೀಸ್, ಅಂಬುಜಾ ಇಂಡಸ್ಟ್ರೀಸ್, ಹೆಚ್ಪಿಸಿಎಲ್ ಸೇರಿ ಹಲವು ಕಂಪನಿಗಳು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡವು.
ಯಾವ ಕಂಪನಿ ಎಷ್ಟು ಬಂಡವಾಳ ಹೂಡಿದೆ?: ರಾಜೇಶ್ ಎಕ್ಸ್‌ಪೋರ್ಟ್ ಲಿ. ₹50 ಸಾವಿರ ಕೋಟಿ ನೀಡಿದೆ. ಇದರಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಹೈದರಾಬಾದ್ ಮೂಲದ ಸೋನಾಲಿ ಪವರ್ ಪ್ರೈ.ಲಿ. ದಾವಣಗೆರೆಯಲ್ಲಿ ಉದ್ಯಮಕ್ಕೆ ₹4800 ಕೋಟಿ ಬಂಡವಾಳ ಹೂಡಿದೆ. ಯಾದಗಿರಿಯಲ್ಲಿ ಉದ್ಯಮ ಆರಂಭಕ್ಕೆ ಭಗೀರತ ಕೆಮಿಕಲ್ ಇಂಡಸ್ಟ್ರೀಸ್ ₹ 344 ಕೋಟಿ ಬಂಡವಾಳ ಮತ್ತು 1000 ಜನಕ್ಕೆ ಉದ್ಯೋಗ ನೀಡಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ದೆಹಲಿ, ಚಿತ್ರದುರ್ಗದಲ್ಲಿ ಉದ್ಯಮ ಸ್ಥಾಪನೆಗೆ ₹ 500 ಕೋಟಿ ಹೂಡಿ 1000 ಉದ್ಯೋಗ ನೀಡಲಿದೆ.
ಪ್ರಭಂಜನ್ ಇಂಡಸ್ಟ್ರೀಸ್ ಹಾವೇರಿಯಲ್ಲಿ ಟೆಕ್ಸ್ಟೈಲ್ ಉದ್ಯಮಕ್ಕೆ ₹500 ಕೋಟಿ ಹೂಡಿಕೆ ಮಾಡಲಿದೆ. ಶಿಲ್ಪಾ ಅಲ್ಬುಮಿಸ್ ಪ್ರೈ.ಲಿ, 221ಕೋಟಿ ಬಂಡವಾಳ 220 ಉದ್ಯೋಗ. ಗುಜರಾತ್ನ ಅಂಬುಜಾ ಎಕ್ಸ್‌ಪೋರ್ಟ್ 120 ಕೋಟಿ ಬಂಡವಾಳ. ಹೈಟೆಜ್ ಆಟಿಕ್ಯುಲಮ್ ಲಿ. ಕೃಷಿ ಉಪಕರಣ ತಯಾರಿಗೆ ₹ 450 ಕೋಟಿ ಬಂಡವಾಳ, 5000 ಮಂದಿಗೆ ಉದ್ಯೋಗ. ಹೆಚ್ಪಿಸಿಎಲ್ 680 ಕೋಟಿ ಬಂಡವಾಳ, 79 ಮಂದಿಗೆ ಉದ್ಯೋಗದ ಒಡಂಬಡಿಕೆಗೆ ಸಹಿ ಹಾಕಿವೆ.