ಹುಬ್ಬಳ್ಳಿ: ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪಾಲ್ಗೊಂಡು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸುಶೀಲ, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಹಿಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ.ಮೀನಾಕ್ಷಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಭಾಗವಹಿಸಿದ್ದರು.
ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಯೋಗಾಸನಗಳ ಕ್ರಮಗಳ ಕುರಿತು ನಿರ್ದೇಶನ ನೀಡಿ, ಅವುಗಳ ಉಪಯೋಗ ತಿಳಿಸಿದರು.
ಯೋಗ ಮಾಡಿ ಗಮನ ಸೆಳೆದ ಶಾಸಕ ಅರವಿಂದ ಬೆಲ್ಲದ:
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಧಾರವಾಡದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಯೋಗ ಮಾಡಿ ಗಮನ ಸೆಳೆದರು. ಧಾರವಾಡದ ಸಪ್ತಾಪೂರ ಬಾವಿ ಹತ್ತಿರವಿರುವ ಸತ್ಯ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಅವರು ಭಾಗವಹಿಸಿದ್ದರು.
ಪ್ರಾಣಾಯಾಮ, ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದ ಅವರು ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ಕೊರೊನಾ ವಿರುದ್ಧ ಹೋರಾಡಲು ಯೋಗ ಅನುಕೂಲವಾಗಲಿದೆ. ಹೀಗಾಗಿ ದಿನಕ್ಕೆ ಕನಿಷ್ಟ ಒಂದು ಗಂಟೆ ಯೋಗ ಮಾಡುವಂತೆ ಮನವಿ ಮಾಡಿದರು.