ಧಾರವಾಡ: ಮದ್ಯದ ಅಂಗಡಿ ಮುಂದೆ ಸಾಲು ನೋಡಿ ನಗಬೇಕೊ ಅಥವಾ ಅಳಬೇಕೊ ಅಥವಾ ನಮ್ಮದು ನಾವೇ ತೆಗೆದುಕೊಂಡು ಹೊಡೆದುಕೊಳ್ಳಬೇಕೊ ಎಂಬ ಪ್ರಶ್ನೆ ಮೂಡುವಂತಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟ ಸರ್ಕಾರಕ್ಕೆ ಆದಾಯ ಕೊಡುತ್ತದೆ ಅನ್ನೋದು ಹಲವು ರಾಜ್ಯದ ಸರ್ಕಾರಗಳ ಅನಿಸಿಕೆಯಾಗಿದೆ. ಅಬಕಾರಿ ಇಲಾಖೆ 18 ರೀತಿಯ ಮದ್ಯದ ದರ ನಿಗದಿ ಮಾಡಿದೆ. ಅದರಲ್ಲಿ ಹೆಚ್ಚಿನ ಟ್ಯಾಕ್ಸ್ ಬರೋದು ಮೊದಲಿನ ನಾಲ್ಕರಲ್ಲಿ ಎಂದ ಅವರು, ಮದ್ಯ ಕುಡಿದ ಜನರು ಮನೆಯಲ್ಲಿ ಹಾಗೂ ಸಮಾಜದಲ್ಲಿ ಮಾಡುವ ಅವಾಂತರ ಅವರ ಕುಟುಂಬದ ಮೇಲೆ ಬೀಳುತ್ತಿದೆ ಎಂದರು.
ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ಅವರು ಮದ್ಯಪಾನ ವಿರೋಧಿ, ಅವರು ಕೇವಲ ಜನರ ಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಕೂಡಾ ಮದ್ಯ ಆರಂಭ ಮಾಡಿದರ ಬಗ್ಗೆ ಕಾಳಜಿ ಇಲ್ಲ. ಮದ್ಯ ನಿಷೇಧ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ ಎಂದರು.
ಬೇರೆ ಮೂಲದಿಂದ ಕೂಡಾ ನಮಗೆ ಆದಾಯ ಬರುತ್ತದೆ. ಕೇವಲ ಮದ್ಯದಿಂದ ಮಾತ್ರವಲ್ಲ. 40 ದಿನದಲ್ಲಿ ಎಷ್ಟು ಜನರು ಯಾವುದಕ್ಕೆ ಸಾವನ್ನಪ್ಪಿದರು ಎನ್ನುವುದು ಚಿಂತನೆ ಮಾಡಬೇಕಾಗಿದೆ. ಈ ಕುರಿತು ನಾನು ಎಲ್ಲಾ ರಾಜ್ಯದವರಿಗೆ ಮನವಿ ಮಾಡುತ್ತೇನೆ ಎಂದರು.