ಧಾರವಾಡ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬೆಳಗ್ಗೆಯಿಂದ ಓಡಾಟದಲ್ಲಿದ್ದೇನೆ. ಶೇ.40ರಷ್ಟರ ಕಮಿಷನ್ ಆರೋಪಕ್ಕೆ ಆಧಾರ ಇಲ್ಲ. ಒಂದು ವೇಳೆ ಇದ್ದರೆ ಖಂಡಿತವಾಗಿಯೂ ಬಿಜೆಪಿ ಸರ್ಕಾರ ಇದನ್ನು ಸಹಿಸೋದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪನವರ ಮೇಲೆ ಆರೋಪ ಮಾಡಿದ್ದಾರೆ. ಆರೋಪಿಸಿದವರು ಸೂಕ್ತ ಆಧಾರ ಕೊಟ್ಟಿಲ್ಲ, ನಿರಾಧಾರವಾದ ಆರೋಪವಾದರೆ ಏನು ಮಾಡೋದು. ಗುತ್ತಿಗೆದಾರ ಆತ್ಮಹತ್ಯೆ ಏಕೆ ಮಾಡಿಕೊಂಡರೋ? ಇದು ನಿಜವಾಗಲೂ ದುರ್ದೈವದ ಸಂಗತಿ. ಇದರ ಬಗ್ಗೆ ಪೊಲೀಸರು ತನಿಖೆ ಮಾಡಲಿ. ಆ ಮೇಲೆ ಮುಂದಿನ ವಿಚಾರ ಮಾಡೋಣ. ಈಶ್ವರಪ್ಪ ಅವರ ಹೆಸರನ್ನೇಕೆ ಹಾಕಿದ್ದಾರೋ, ತನಿಖೆ ಆಗಲಿ ಆಮೇಲೆ ಆ ಬಗ್ಗೆ ವಿಚಾರ ಮಾಡೋಣ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮುಸ್ಲಿಂ ಹೆಸರುಗಳ ಬದಲಾವಣೆ ವಿಚಾರವಾಗಿ ಜೋಶಿ ಮಾತನಾಡಿದರು. ಸಮಾಜಕ್ಕೆ ಕೊಡುಗೆ ಕೊಟ್ಟವರ ಹೆಸರು ತೆಗೆಯಬೇಕು ಎಂದಿಲ್ಲ. ಅದರ ಬಗ್ಗೆ ವಿಚಾರ ಮಾಡಿ ಹೇಳುತ್ತೇನೆ ಎಂದರು. ನುಗ್ಗಿಕೇರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಕೋಮುಸೌಹಾರ್ದ ಕಾಪಾಡಬೇಕು. ಇದೇ ಸಂದರ್ಭದಲ್ಲಿ ನ್ಯಾಯಾಂಗಕ್ಕೂ ಗೌರವ ನೀಡಬೇಕು.
ಇದನ್ನೂ ಓದಿ: ಅಂದು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ?: ಈಶ್ವರಪ್ಪ ರಾಜೀನಾಮೆ ಆಗ್ರಹಕ್ಕೆ ಸಿಎಂ ಮರು ಪ್ರಶ್ನೆ
ಭಾರತದ ನ್ಯಾಯಾಂಗಕ್ಕೆ ಗೌರವ ನೀಡಬೇಕು. ಅಲ್ಲಿ ನಡೆದದ್ದನ್ನು ನಾನು ಸಮರ್ಥಿಸುತ್ತಿಲ್ಲ, ಕಾನೂನನ್ನು ಕೈಗೆ ತೆಗೆದುಕೊಳ್ಳೋದು ತಪ್ಪು. ಕೋಮು ಸೌಹಾರ್ದತೆ ಕೆಡಿಸೋದು ತಪ್ಪು. ಅಯೋಧ್ಯಾದಿಂದ ಹಿಜಾಬ್‌ವರೆಗೆ ನ್ಯಾಯಾಂಗದಲ್ಲಿ ನಂಬಿಕೆ ಇಡಬೇಕು. ಅದನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.