ಧಾರವಾಡ: ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರ ಮೇಲೆ ದರ್ಪ ತೋರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿ, ನನಗೆ ಆ ವಿಷಯ ಗೊತ್ತಿಲ್ಲ ಎಂದರು.
ಯಾರೇ ಮನವಿ ಕೊಡಲು ಬಂದಿದ್ರೂ ಆ ಮನವಿ ತೆಗೆದುಕೊಳ್ಳಬೇಕು. ಅರವಿಂದ ಲಿಂಬಾವಳಿ ಕೂಡಾ ಮನವಿ ತೆಗೆದುಕೊಂಡಿರಬೇಕು. ಅವರು ಆ ರೀತಿ ಮಾಡುವ ವ್ಯಕ್ತಿಯಲ್ಲ. ಮೂರು ಬಾರಿ ಶಾಸಕರಾದವರು. ಜನರ ಬಗ್ಗೆ ಅವರಿಗೆ ಗೊತ್ತಿದೆ. ನೈಜ ಘಟನೆಯೇನು ಎಂದು ತಿಳಿದು ಮಾತನಾಡುತ್ತೇನೆ ಎಂದು ಹೇಳಿದರು.
ಐಟಿ ಕಂಪನಿಯವರು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಐಟಿ, ಬಿಟಿ, ಬಿಲ್ಡರ್ಸ್, ಬೇರೆ ಉದ್ಯೋಗದವರು ಹೀಗೆ ಎಲ್ಲರೂ ಭೂ ಒತ್ತುವರಿ ಮಾಡಿದ್ದಾರೆ. ರಾಜಕಾಲುವೆ, ಕೆರೆ ಒತ್ತುವರಿ ಕೂಡ ಮಾಡಿದ್ದಾರೆ. ಇದರಿಂದಾಗಿ ಸ್ವಲ್ಪ ಮಳೆ ಬಂದರೂ ಸಮಸ್ಯೆಯಾಗುತ್ತಿದೆ. ಬೆಂಗಳೂರಿಗೆ ಸಾವಿರಾರು ಕೋಟಿ ರೂ ರಸ್ತೆ ಬಜೆಟ್ ಇದೆ.
ಇಷ್ಟು ಹಣ ಹಾಕಿದ್ದಲ್ಲದೇ ರಾಜ್ಯ ಸರ್ಕಾರ ಬೆಂಗಳೂರಿಗೆ ಮಹತ್ವ ಕೊಟ್ಟಿದೆ. ಒತ್ತುವರಿ ಬಗ್ಗೆ ಸಿಎಂ ಕ್ರಮ ಕೈಗೊಳ್ಳುವ ಕೆಲಸ ಮಾಡುತಿದ್ದಾರೆ. ನೀರು ಒಂದೇ ಕಡೆ ನಿಲ್ಲುವುದರಿಂದ ರಸ್ತೆ ಹಾಳಾಗುತ್ತಿದೆ. ನಾನು ಸಿಎಂ ಬೊಮ್ಮಾಯಿ ಜತೆ ಈ ವಿಷಯ ಚರ್ಚೆ ಮಾಡಿದ್ದೇನೆ. ಸಿಎಂ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉತ್ತರಿಸಿದರು.
ಇದನ್ನೂ ಓದಿ: ನಾನೇನು ರೇಪ್ ಮಾಡಿದ್ನಾ ಎಂದ ಲಿಂಬಾವಳಿ... ಸ್ತ್ರೀಯರಿಗೆ ಮಾಡಿದ ಅವಮಾನ: ಕಾಂಗ್ರೆಸ್ ಆಕ್ರೋಶ