ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಹಳೇಹುಬ್ಬಳ್ಳಿಯ ನೇಕಾರ ನಗರದಲ್ಲಿ ಭಾನುವಾರ ನಡೆದಿದೆ. ನಾಗರಾಜ ಚಲವಾದಿ ಎಂಬಾತ ಕೊಲೆಗೀಡಾದ ಯುವಕ. ಹುಬ್ಬಳ್ಳಿಯ ನೇಕಾರ ನಗರದ ಸಂತೋಷ ಕಾಲೊನಿಯಲ್ಲಿ ಆಟೋದಲ್ಲಿ ಬಂದಿದ್ದ ನಾಲ್ಕೈದು ಜನರ ಗುಂಪೊಂದು ನಾಗರಾಜ ಚಲವಾದಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ನಾಗರಾಜ ಮೃತಪಟ್ಟಿದ್ದಾನೆ.
ನಾಗರಾಜನ ಜತೆ ಇದ್ದವನ ಮೇಲೂ ಹಲ್ಲೆಗೆ ಯತ್ನ: ನಾಗರಾಜ ಜೊತೆ ಇದ್ದ ಇನ್ನೊಬ್ಬನ ಮೇಲೆ ಕೂಡಾ ಹಲ್ಲೆಗೆ ಮುಂದಾದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಿಖಿಲ್, ಪ್ರದೀಪ್ ಶಶಿ ಎಂಬುವವರು ಆಟೋದಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಆಸ್ತಿ ವಿಚಾರ ಹಾಗೂ ಹಳೇ ವೈಷಮ್ಯ ಘಟನೆಗೆ ಕಾರಣವಿರಬಹುದು ಎಂದು ಮೃತ ನಾಗರಾಜ ಸ್ನೇಹಿತ ಕೃಷ್ಣ ಮಾಹಿತಿ ನೀಡಿದ್ದಾರೆ.
ದಾಳಿ ನಡೆಸಿದಾಗ ನಾನು ನಾಗರಾಜ ಜೊತೆ ಇದ್ದೆ. ಆದ್ರೆ ನನ್ನ ಮೇಲೂ ದಾಳಿ ಮಾಡಲು ಯತ್ನಿಸಿದರು. ಆಗ ನಾನು ಅವರಿಂದ ತಪ್ಪಿಸಿಕೊಂಡೆ. ದಾಳಿ ಮಾಡಿದವರ ಉದ್ದೇಶ ನಾಗರಾಜ ಕೊಲೆ ಮಾಡುವುದಾಗಿತ್ತು. ಕೊಲೆ ಬಗ್ಗೆ ತನಿಖೆ ನಡೆಸಬೇಕು. ಯಾರು ಕೊಲೆ ಮಾಡಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು: ಹಾಡಹಗಲೇ ನಾಗರಾಜ ಎಂಬ ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ. ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕುಟುಂಬಸ್ಥರ ಅಕ್ರಂದನ: ಹಾಡಹಗಲೇ ತಮ್ಮ ಮಗ ನಾಗರಾಜನ ಕೊಲೆಯ ಸುದ್ದಿ ಕೇಳಿ ಆತನ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಮನೆ ಮಗನನ್ನು ಕಳೆದುಕೊಂಡು ಪೋಷಕರು ದಿಕ್ಕು ತೋಚದಂತಾಗಿದ್ದಾರೆ.
ಹಾವೇರಿ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ, 8 ಮಂದಿಗೆ ಗಾಯ.. ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು 8 ಮಂದಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾಪುರ ತಾಂಡಾದಲ್ಲಿ ನಡೆದಿದೆ. ಈ ಪೈಕಿ ಓರ್ವ ಸ್ಥಿತಿ ಗಂಭೀರವಾಗಿದೆ. ಚಾಕು, ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಗ್ರಾಮದ ಬಸ್ ನಿಲ್ದಾಣದ ವಿಚಾರವಾಗಿ ಘರ್ಷಣೆ ನಡೆದಿದೆ ಎಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಓರ್ವ ಯುವಕ ಹಲವರಿಗೆ ಚಾಕುವಿನಿಂದ ಇರಿದಿದ್ದಾನೆ. ಕಲ್ಲು ಹಿಡಿದುಕೊಂಡು ಜಗಳವಾಡುವ ದೃಶ್ಯಗಳು ಲಭಿಸಿವೆ. ಓರ್ವನ ಎದೆಗೆ ಚಾಕು ಇರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆಗೊಳಗಾದವರನ್ನು ರವಿ, ಶಂಕರ್, ರಾಜು, ಮಹೇಶ್, ಲಾಲಪ್ಪ, ಹನುಮಂತ ಹಾಗೂ ಅಕ್ಷಯ್ ಲಮಾಣಿ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನ ಕೈ ಬೆರಳು ತುಂಡಾಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಚಾಕು ಇರಿತಕ್ಕೊಳಗಾದ ಯುವಕ ಹಾಗೂ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಶ್ ಲಮಾಣಿ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ದೊಡ್ಡಬೆಳವಂಗಲ ಯುವಕರ ಹತ್ಯೆ: ಕಾಲಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ