ಹುಬ್ಬಳ್ಳಿ: ಎಲ್ಲ ವಲಯಗಳಂತೆ ಕೋವಿಡ್ ಮಹಾಮಾರಿ ಹುಬ್ಬಳ್ಳಿ - ಧಾರವಾಡ ಜಲಮಂಡಳಿಯ ಮೇಲೂ ಪರಿಣಾಮ ಬೀರಿದ್ದು, ಸೋಂಕು ಆವರಿಸಿಕೊಂಡ ಬಳಿಕ ಗ್ರಾಹಕರು ಬಿಲ್ ಕಟ್ಟಲು ಹಿಂದೇಟು ಹಾಕುತ್ತಿರುವ ಕಾರಣ ಮಂಡಳಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಜಲಮಂಡಳಿಗೆ ಶೇ.90 ರಷ್ಟು ಗ್ರಾಹಕರು ನೀರಿನ ಶುಲ್ಕ ಕಟ್ಟಲು ಬಾಕಿ ಇದೆ. ಜೂನ್ ತಿಂಗಳಲ್ಲಿ ಶುಲ್ಕದ ರೂಪದಲ್ಲಿ ಬರಬೇಕಿದ್ದ 310.85 ಕೋಟಿ ರೂಪಾಯಿಯಲ್ಲಿ ಇದುವರೆಗೆ ಸಂಗ್ರಹವಾಗಿರುವುದು ಕೇವಲ 31.15 ಕೋಟಿ ರೂ. ಅಂದರೆ, ಶೇ. 10.08ರಷ್ಟು ಮಾತ್ರ ಶುಲ್ಕ ಸಂಗ್ರಹವಾಗಿದೆ. ಗ್ರಾಹಕರಿಂದ ಬಿಲ್ ಪಾವತಿಯಾಗದ ಕಾರಣ ಸಿಬ್ಬಂದಿ ವೇತನ ಸೇರಿದಂತೆ ಹಲವು ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗುವುದು ಜಲ ಮಂಡಳಿಗೆ ಸವಾಲಾಗಿದೆ.
ಓದಿ : ಹುಬ್ಬಳ್ಳಿ: ಮಾಸ್ಕ್ ವೆಂಡಿಂಗ್ ಮಷಿನ್ಗಳಲ್ಲಿ ಮಾಸ್ಕ್ಗಳೇ ಮಾಯ
ನೀರಸಾಗರ, ಮಲಪ್ರಭಾ ಜಲಾಶಯಗಳು ಮತ್ತು ಇತರ ಜಲಮೂಲಗಳಿಂದ ಹುಬ್ಬಳ್ಳಿ ನಗರಕ್ಕೆ ನಿತ್ಯ 140 ಎಂಎಲ್‌ಡಿ (ದಶಲಕ್ಷ ಲೀಟರ್) ನೀರು ಪೂರೈಕೆ ಮಾಡಲಾಗುತ್ತದೆ. ಈ ಪೈಕಿ 126 ಎಂಎಲ್‌ಡಿ ಗೃಹ ಬಳಕೆಗೆ, 10 ಎಂಎಲ್‌ಡಿ ಬಲ್ಕ್ ಬಳಕೆಗೆ ಹಾಗೂ 4.5 ಎಂಎಲ್‌ಡಿ ವಾಣಿಜ್ಯ ಮತ್ತು ಗೃಹಯೇತರ ಉದ್ದೇಶಕ್ಕೆ ವಿನಿಯೋಗಿಸಲಾಗುತ್ತದೆ. ಹೊರಗುತ್ತಿಗೆಯವರೂ ಸೇರಿದಂತೆ ಮಂಡಳಿಯಲ್ಲಿ ಒಟ್ಟು 300 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರ ವೇತನ ಶುಲ್ಕದ ಹಣದಲ್ಲೇ ಆಗಬೇಕಿದೆ.
ಸದ್ಯ,ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವವರು ಮತ್ತು ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿಯಿದೆ. ಈಗ ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ಶುಲ್ಕ ಸಂಗ್ರಹ ಯಥಾಸ್ಥಿತಿಗೆ ಬಂದರೆ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ.