ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮೇಯರ್ ಗದ್ದುಗೆ ಏರಲಿದೆ. ಆದರೆ, ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬಿಟ್ಟು ಕೊಟ್ಟಿದೆ.
ಕಳೆದ ಸೋಮವಾರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. 82 ವಾರ್ಡ್ಗಳ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರು ಗೆಲುವು ಸಾಧಿಸಿದ್ದರು. ಆದರೆ, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳು ಇಲ್ಲದಿರುವುದರಿಂದ ಕಮಲ ಪಾಳಯ ಸಮಸ್ಯೆಗೆ ಸಿಲುಕಿತ್ತು.
ಕರ್ನಾಟಕ ಸರ್ಕಾರ ಈಗಾಗಲೇ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿ ಘೋಷಣೆ ಮಾಡಿದೆ. ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ 'ಎ' ಮತ್ತು ಉಪಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಲಾಗಿದೆ. 39 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಅರ್ಹರಿರುವ ಯಾವುದೇ ಅಭ್ಯರ್ಥಿ ಇಲ್ಲ.
ಆದ್ದರಿಂದ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಚುನಾವಣೆ ಗೆದ್ದಿರುವ 69 ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ್‌ಗೆ ಉಪ ಮೇಯರ್ ಸ್ಥಾನ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಲಿದೆ.
ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ 69 ನೇ ವಾರ್ಡ್‌ನಿಂದ ದುರ್ಗಮ್ಮ ಬಿಜವಾಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ ಬಿಜವಾಡರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಈಗ ಆ ಆದೇಶವನ್ನು ವಾಪಸ್ ಪಡೆಯಲಾಗಿದೆ. ಶಶಿಕಾಂತ ಬಿಜವಾಡ, ಜಗದೀಶ್ ಶೆಟ್ಟರ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ಶೆಟ್ಟರ್ - ಬೆಲ್ಲದ ಮುನಿಸು ಮಾಯ: ಸಿಎಂ ಆಯ್ಕೆ ವಿಚಾರದಲ್ಲಿ ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ಹಾಗೂ ಅರವಿಂದ ಬೆಲ್ಲದ ಇದೀಗ ಬಿಜೆಪಿ ಕಚೇರಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೇಯರ್ ಆಯ್ಕೆ ವಿಚಾರದಲ್ಲಿ ಪರಸ್ಪರ ಸಮಾಲೋಚನೆ ನಡೆಸಿದ್ದಾರೆ.
ಉಪಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಬಂಡಾಯವಾಗಿ ಗೆದ್ದ ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ ಬಿಜವಾಡರನ್ನು ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಆದರೆ, ಮೇಯರ್ ಆಯ್ಕೆ ವೇಳೆ ಇಬ್ಬರ ಮುನಿಸಿನಿಂದ ಜೋಶಿ ಬೆಂಬಲಿಗರಿಗೆ ಜಾಕ್ ಪಾಟ್ ಹೊಡೆಯುವ ಸಾಧ್ಯತೆ ದಟ್ಟವಾಗಿತ್ತು. ಸದ್ಯ ಅರವಿಂದ ಬೆಲ್ಲದ - ಜಗದೀಶ್ ಶೆಟ್ಟರ್ ಒಂದಾಗಿದ್ದರಿಂದ ಮೇಯರ್ ಯಾರಾಗುತ್ತಾರೆ ಅನ್ನೋ ಕುತೂಹಲ ದಟ್ಟವಾಗಿದೆ.