ಧಾರವಾಡ: ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪ ಪ್ರಕರಣ ಎದುರಿಸುತ್ತಿರುವ ಕೆಎಲ್ಇ ಕಾಲೇಜಿನ ಮೂವರು ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಲು ಬೆಂಗಳೂರು ಮೂಲದ ವಕೀಲರು ಬಿಗಿ ಪೊಲೀಸ್ ಭದ್ರತೆಯಲ್ಲಿ ನಗರಕ್ಕೆ ಆಗಮಿಸಿದ್ದರು.
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬೆಂಗಳೂರು ವಕೀಲರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ನ್ಯಾಯಾಲಯದ ಆವರಣದ ಹಿಂಬಾಗಿಲಿನಿಂದ ವಕೀಲರನ್ನು ಪೊಲೀಸರು ಕರೆತಂದರು. ಈ ವೇಳೆ ನ್ಯಾಯಾಲಯಕ್ಕೆ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು.
ಪೊಲೀಸರ ಪ್ಲಾನ್ ಬಿ ಯಶಸ್ವಿಯಾಗಿದ್ದು, ಮುಂಬಾಗಿಲಲ್ಲಿ 3-4 ಪೊಲೀಸ್ ವಾಹನ ನಿಲ್ಲಿಸಿ ಸಾರ್ವಜನಿಕರ, ಮಾಧ್ಯಮದ ದಿಕ್ಕು ತಪ್ಪಿಸಿದ ಪೊಲೀಸರು ವಕೀಲರನ್ನು ನ್ಯಾಯಾಲಯದ ಒಳಗೆ ಕಳಿಸಿದರು. ಹಿಂಬಾಗಿಲಿನಿಂದ ಆರೋಪಿಗಳ ಪರ ವಕೀಲರನ್ನು ಕೋರ್ಟ್ ಒಳಗೆ ಕರೆದೊಯ್ದರು.
ಅರ್ಜಿ ಸಲ್ಲಿಸಿದ ಬಳಿಕ ಹಿಂಬಾಗಿಲಿನಿಂದಲೇ ವಕೀಲರು ಹೆದ್ದಾರಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.