ಹುಬ್ಬಳ್ಳಿ: ಸ್ಯಾನಿಟೈಸರ್ ಕುಡಿದು ಅಕ್ಕ -ತಮ್ಮ ಸಾವನಪ್ಪಿದ ಪ್ರಕರಣದಿಂದ, ಕಲಘಟಗಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕಲಘಟಗಿಯ ಗಂಬ್ಯಾಪುರದಲ್ಲಿ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ನ್ನು ಸೇವಿಸಿದ್ದರು ಎನ್ನಲಾಗಿದೆ. ಇದೇ ಸ್ಯಾನಿಟೈಸರ್ ಕುಡಿದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಕ ಹಾಗೂ ತಮ್ಮ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇವರ ಜೊತೆ ಇನ್ನು 13 ಜನರು ಸ್ಯಾನಿಟೈಸರ್ ಸೇವನೆ ಮಾಡಿದ್ದರು ಎಂದು ಹೇಳಲಾಗ್ತಿದೆ. ಅದರಲ್ಲಿ ನಾಲ್ವರನ್ನು ಕಲಘಟಗಿ ಇನ್ಸ್ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಕಿಮ್ಸ್ಗೆ ಕಳುಹಿಸಿಕೊಡಲಾಗಿದೆ.
ಇನ್ನು ತಲೆಮರೆಸಿಕೊಂಡಿದ್ದ 9 ಜನರಿಗೆ ಹುಡುಕಾಟ ನಡೆಸಿದ್ದು, ಗ್ರಾಮಕ್ಕೆ ಕಲಬೆರಕೆ ಸ್ಯಾನಿಟೈಸರ್ ತಂದವರನ್ನು ಹುಡುಕಲು ತಂಡ ರಚಿಸಲಾಗಿದೆ. ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನತೆಗೆ ಧೈರ್ಯ ತುಂಬಿದ್ದು, ಯಾರು ಸೇವನೆ ಮಾಡಿದ್ದೀರಿ ಅವರು ಬಂದು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.