ಹುಬ್ಬಳ್ಳಿ: ಅಗಸ್ತ್ಯ ಫೌಂಡೇಶನ್ ವಲಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ನಗರದ ಉಣಕಲ್ ನಿವಾಸಿ ಶಿವಾನಂದ ಛಲವಾದಿ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್ಗಳಿಂದ ವಿಜ್ಞಾನ ಮಾದರಿಗಳನ್ನು ರಚಿಸಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುತ್ತಿದ್ದಾರೆ.
ಮೊದಲಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಶಿವಾನಂದ ಛಲವಾದಿ, ಸುಮಾರು 200ಕ್ಕೂ ಹೆಚ್ಚು ಬಾಟಲ್‌ಗಳನ್ನು ಸಂಗ್ರಹಿಸಿ ಅವುಗಳಿಂದ ವಿಜ್ಞಾನ ಪ್ರಯೋಗದ ಪರಿಕರಗಳನ್ನು ತಯಾರಿಸಿದ್ದಾರೆ. ಪ್ಲಾಸ್ಟಿಕ್ ಬಾಟಲ್ಗಳಿಂದ ಜಲಚಕ್ರ, ದೃಷ್ಟಿ ಆಳ ಬೆಳಕು, ಸರಳ ರೇಖೆಯಲ್ಲಿ ಚಲಿಸುವುದು, ಗಾಳಿಗೆ ಸರ್ವತೋಮುಖ ಒತ್ತಡ, ನ್ಯೂಟನ್ ಕಾರು, ದೃಷ್ಟಿ ಛಲ, ಗುರುತ್ವ ಕೇಂದ್ರದ ಶಬ್ದ ಮಾದರಿ, ಪಾಸ್ಕಲ್ ನಿಯಮ, ಬರ್ನೋಲಿಯ ತತ್ತ್ವ, ಎಂಜಿನ್ ಮಾದರಿ ಹಾಗೂ ವಿದ್ಯುತ್ ಹೀಗೆ ಸುಮಾರು ನಲವತ್ತಕ್ಕೂ ಹೆಚ್ಚು ವಿಜ್ಞಾನ ಪರಿಕರಗಳನ್ನು ತಯಾರಿಸಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುತ್ತಿದ್ದಾರೆ.
ಮಕ್ಕಳು ವಿಜ್ಞಾನ ಕ್ಷೇತ್ರದ ಬಗ್ಗೆ ಹೆಚ್ಚು ಜ್ಞಾನ ಹೊಂದಬೇಕು ಎಂಬ ಸದುದ್ದೇಶದಿಂದ ಪ್ಲಾಸ್ಟಿಕ್ ಬಾಟಲ್ ಗಳಿಂದ ಪರಿಕರಗಳನ್ನು ತಯಾರಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಮಕ್ಕಳಲ್ಲಿ ಹೆಚ್ಚಿನ ಜ್ಞಾನ ತುಂಬಲು ಸಾಧ್ಯವಾಗುತ್ತದೆ. ಎಲ್ಲ ಶಾಲೆಗಳಲ್ಲಿ ಇದೇ ರೀತಿ ನಿರುಪಯುಕ್ತ ಪ್ಲಾಸ್ಟಿಕ್ನಿಂದ ವಿಜ್ಞಾನ ಪ್ರಯೋಗಗಳನ್ನು ತಯಾರಿಸಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಒಲವು ಹೆಚ್ಚಿಸಬಹುದಾಗಿದೆ ಎನ್ನುತ್ತಾರೆ ಶಿವಾನಂದ.