ಹುಬ್ಬಳ್ಳಿ: ಕ್ರೀಡಾಂಗಣಗಳು ಅಥವಾ ಆಟದ ಮೈದಾನಗಳು ನಗರದ ಆರೋಗ್ಯದ ಸಂಕೇತ. ವೃದ್ಧರಿಂದ ಹಿಡಿದು ಯುವಕರು, ಮಕ್ಕಳು ಕ್ರೀಡೆ ಹಾಗೂ ಕಸರತ್ತಿನಲ್ಲಿ ತೊಡಗಿಕೊಳ್ಳುವ ಸ್ಥಳಗಳು ಇವು. ಆದ್ರೆ ನಗರೀಕರಣ ಹಾಗೂ ವಾಣಿಜ್ಯೀಕರಣದಿಂದ ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕ್ರೀಡಾಂಗಣಗಳು ಉಳಿದುಕೊಂಡಿದ್ದು, ಕ್ರೀಡಾಂಗಣಗಳ ಕೊರತೆ ಎದ್ದು ಕಾಣುತ್ತಿದೆ.
ಈ ಹಿಂದೆ ನಗರ ಭಾಗದಲ್ಲಿ ಕ್ರೀಡಾಪಟುಗಳು ಆಟ ಆಡಲು ದೂರ ಹೋಗಬೇಕಿರಲಿಲ್ಲ. ತಾವು ವಾಸಿಸುವ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಕ್ರೀಡಾಂಗಣಗಳು ಸಿಗುತ್ತಿದ್ದವು. ಆದರೀಗ ಖಾಸಗೀಕರಣ ಹಾಗೂ ರಿಯಲ್ ಎಸ್ಟೇಟ್ ಎಫೆಕ್ಟ್‌ನಿಂದ ಕ್ರೀಡಾಂಗಣಗಳು ಮಾಯವಾಗುತ್ತಿವೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದಲ್ಲೂ ಹಲವು ಕ್ರೀಡಾಂಗಣಗಳು ವಾಣಿಜ್ಯೀಕರಣವಾಗಿವೆ. ನಗರದ ನೆಹರೂ ಕ್ರೀಡಾಂಗಣ ಮಹಾನಗರ ಪಾಲಿಕೆ ಸುಪರ್ದಿಗೆ ಬಂದರೂ ಕೂಡ ಇಲ್ಲಿ ಕ್ರೀಡಾ ಚಟುವಟಿಕೆ ನಡೆಯುವುದಕ್ಕಿಂತ ಹೆಚ್ಚಾಗಿ ಸರ್ಕಾರಿ ಹಾಗೂ ಖಾಸಗಿ ಸಭೆ ಸಮಾರಂಭಗಳಿಗೆ ಮೀಸಲಾಗಿತ್ತು. ಆದ್ರೆ ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ರು, ಆಮೆಗತಿ ಕಾಮಗಾರಿ ಕ್ರೀಡಾ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಇನ್ನು ಕೆಎಸ್ಸಿಎ ಹಾಗೂ ರೈಲ್ವೆ ಕ್ರೀಡಾಂಗಣಗಳಿದ್ದೂ ಇಲ್ಲದಂತಿವೆ. ಕೆಎಸ್ಸಿಎದಲ್ಲಿ ಹಣ ಪಾವತಿ ಮಾಡಬೇಕಿದೆ. ರೈಲ್ವೆ ಕ್ರೀಡಾಂಗಣ ರೈಲ್ವೆ ಸಿಬ್ಬಂದಿಗೆ ಸೀಮಿತವಾಗಿವೆ. ಜಿಮಖಾನ ಕ್ರೀಡಾಂಗಣವನ್ನು ಪ್ರಭಾವಿಗಳು ಕ್ಲಬ್ ಆಗಿ ಪರಿವರ್ತಿಸಲು ಮುಂದಾಗಿದ್ದು, ಇದನ್ನು ಉಳಿಸಿಕೊಳ್ಳಲು ಗ್ರೌಂಡ್ ಬಚಾವ್ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತಿದೆ.
ಯುವಕರು ಕ್ರೀಡೆಯಲ್ಲಿ ಸಾಧನೆ ಮಾಡಲು ಕ್ರೀಡಾಂಗಣಗಳ ಅವಶ್ಯಕತೆ ಇದೆ. ಸಾಕಷ್ಟು ಯುವ ಕ್ರೀಡಾಪಟುಗಳು ಕ್ರೀಡಾಂಗಣಗಳಿಲ್ಲದೇ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ: ಮೂಲ ಸೌಕರ್ಯಗಳಿಂದ ವಂಚಿತವಾದ ಶಿವಮೊಗ್ಗ ಜಿಲ್ಲೆಯ ರುದ್ರಭೂಮಿಗಳು
ಈ ಹಿಂದೆ ಆಟವಾಡಲು ಇದ್ದ ಖಾಲಿ ಜಾಗಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್‌ಗಳು ಕಬಳಿಸಿದ್ದಾರೆ. ಯಾವುದೇ ಜಾಗವನ್ನು ಖಾಲಿ ಬಿಡದೆ ದೊಡ್ಡ ದೊಡ್ಡ ಬಿಲ್ಡಿಂಗ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅವಳಿ ನಗರದಲ್ಲಿ ಕ್ರೀಡಾಂಗಣಗಳನ್ನು ಉಳಿಸಲು ಹೆಚ್ಚಿನ ಒಲವು ತೋರಿಸಬೇಕಿದೆ.