ಹುಬ್ಬಳ್ಳಿ: ಪವರ್ಲಿಫ್ಟಿಂಗ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹುಬ್ಬಳ್ಳಿಯ ಹುಡುಗಿ ಸನಾ ಮಳಗಿ ಪ್ರೋತ್ಸಾಹದ ಜೊತೆಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಘನ ಗಾತ್ರದ ಭಾರ ಎತ್ತಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಇಂತಹ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪವರ್ಲಿಫ್ಟಿಂಗ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಉತ್ತರ ಕರ್ನಾಟಕದ ಮೊದಲ ಯುವತಿ ಎಂಬ ಶ್ರೇಯಕ್ಕೂ ಈಕೆ ಪಾತ್ರರಾಗಿದ್ದಾರೆ.
ಚಿಗುರಿದ ಪವರ್ಲಿಫ್ಟಿಂಗ್ ಕನಸು
ಪ್ರೌಢಶಾಲಾ ದಿನಗಳಲ್ಲಿ ಗುಂಡು ಎಸೆತದಲ್ಲಿ ಸನಾ ಆಸಕ್ತಿ ಹೊಂದಿದ್ದರು. ಅಂದು ಅವರ ಸಾಧನೆ ಕಂಡ ರೈಲ್ವೆ ಇಲಾಖೆ ನೌಕರ ಅಬ್ದುಲ್ ಮುನಾಫ ಎಂಬುವವರು ಪವರ್ಲಿಫ್ಟಿಂಗ್ ಕ್ರೀಡೆಯಲ್ಲಿ ತೊಡಗಿಕೊಳ್ಳಲು ನೆರವಾಗಿದ್ದಾರೆ. ಕುಟುಂಬದವರಿಗೆ ತಿಳುವಳಿಕೆ ನೀಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ಸಹಾಯ ಮಾಡಿದರು. ಅಂದಿನಿಂದ ಇಂದಿನವರೆಗೂ ಸನಾ ಪವರ್ಲಿಫ್ಟಿಂಗ್ನಲ್ಲಿ ತಮ್ಮದೇ ಆದ ದಾಖಲೆ ಸೃಷ್ಟಿಸುತ್ತ ಮುನ್ನುಗ್ಗುತ್ತಿದ್ದಾರೆ.
ಬಡತನದ ಮಧ್ಯೆಯೇ ಸಾಧನೆ
ಇವರ ತಂದೆ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಇದರಲ್ಲಿಯೇ ಇವರ ಕುಟುಂಬದ ಜೀವನ ಸಾಗುತ್ತಿದೆ. ತಮ್ಮ ಕ್ರೀಡೆಗೆ ತಗುಲುವ ಖರ್ಚು ನಿಭಾಯಿಸಿಕೊಳ್ಳಲು ಸ್ಥಳೀಯ ಜಿಮ್‌ನಲ್ಲಿ ತರಬೇತುದಾರರಾಗಿ ಸನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡತನದ ಮಧ್ಯೆಯೂ ಕುಟುಂಬ ಸದಸ್ಯರು ಕ್ರೀಡಾಪಟುವನ್ನು ಬೆಂಬಲಿಸುತ್ತಿದ್ದಾರೆ.
ಹಲವು ಸಾಧನೆ
2018ರಲ್ಲಿ ಏಷಿಯನ್ ಪವರ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (ಸ್ಕಾಟ್, ಬೆಂಚ್ ಪ್ರೆಸ್, ಡೆಡ್ ಲಿಫ್ಟ್) ನಾಲ್ಕನೇ ಸ್ಥಾನ, (ಸ್ಕಾಟ್) ತೃತೀಯ ಸ್ಥಾನ ಪಡೆದಿದ್ದಾರೆ. 2017-18ರಲ್ಲಿ ಫೆಡರೇಶನ್ ಕಪ್ ಪವರ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಯೋಜಿಸುವ ರಾಜ್ಯಮಟ್ಟದ (ಪವರ್ಲಿಫ್ಟಿಂಗ್ 72 ಕೆ.ಜಿ) ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆಯುವ ಮೂಲಕ ಸ್ಟ್ರಾಂಗ್ ವುಮನ್ ಆಗಿದ್ದಾರೆ.
ಪವರ್ ಗರ್ಲ್
ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಯೋಜಿಸುವ ರಾಜ್ಯಮಟ್ಟದ ಪವರ್ಲಿಫ್ಟಿಂಗ್ನಲ್ಲಿ (ಸ್ಕ್ವಾಟ್ 202.5 ಕೆಜಿ) ವಿಶೇಷ ಸಾಧನೆ ಮಾಡುವ ಮೂಲಕ ಉತ್ತರ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಸಾಧಕಿಗೆ ಸಿಕ್ಕಿಲ್ಲ ಪ್ರೋತ್ಸಾಹ
ಕ್ರೀಡಾಪಟು ಸನಾ ಹಲವು ಪ್ರಥಮಗಳ ದಾಖಲೆಯನ್ನು ಈವರೆಗೆ ತನ್ನ ಹೆಸರಿಗೆ ಬರೆಸಿಕೊಂಡಿದ್ದರೂ ಸ್ಥಳೀಯವಾಗಿಯೂ ಕ್ರೀಡಾಪಟುವನ್ನು ಗುರುತಿಸುವ ಕೆಲಸವಾಗಬೇಕಿದೆ.
ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆಲ್ಲುವ ತವಕ
ಸನಾ ಮಳಗಿಗೆ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆಲ್ಲುವ ಬಹುದೊಡ್ಡ ಕನಸಿದೆ. ಮನೆಯಲ್ಲಿರುವ ಇಬ್ಬರು ಅಣ್ಣಂದಿರು, ಒಬ್ಬ ಅಕ್ಕ, ತಂಗಿಯ ಮದುವೆಯಾಗಿದ್ದರೂ ತನ್ನ ಕನಸು ನನಸು ಮಾಡುವ ಉದ್ದೇಶದಿಂದಲೇ ಮದುವೆಯನ್ನು ನಿರಾಕರಿಸಿದ್ದಾರೆ ಸನಾ.
ತನ್ನ ಕನಸು ನನಸಾಗಿಸಿಕೊಳ್ಳಲು ಪ್ರೋತ್ಸಾಹದ ಜೊತೆಗೆ ಸಹಾಯಧನದ ಅವಶ್ಯಕತೆ ಇದೆ. ನೆರವು ಸಿಕ್ಕರೆ ಮತ್ತಷ್ಟು ಸಾಧನೆ ಮಾಡುತ್ತೇನೆ ಎನ್ನುತ್ತಾರೆ ಸನಾ ಮಳಗಿ.