ಹುಬ್ಬಳ್ಳಿ: ನೂರಾರು ಕನಸು ಕಂಡಿದ ಬಾಲಕನ ಬದುಕನ್ನು ಹುಬ್ಬಳ್ಳಿಯ ಚೇತನಾ ಕಾಲೋನಿಯಲ್ಲಿರುವ ಕಟ್ಟಡ ದುಸ್ತರಗೊಳಿಸಿದೆ. 2018 ಸೆಪ್ಟೆಂಬರ್ 25 ರಂದು ಸ್ನೇಹಿತರ ಜೊತೆ ಆಟವಾಡುತ್ತಿದ್ದ ಬಾಲಕ, ನೀರು ಕುಡಿಯಲು ಸ್ನೇಹಿತನ ಮನೆಗೆ ಹೋಗಿದ್ದಾನೆ. ಕಟ್ಟಡದ ಮೆಟ್ಟಿಲುಗಳ ಸಮೀಪ ಹಾದು ಹೋಗಿದ್ದ 9 ಕೆವಿ ವಿದ್ಯುತ್ ಲೈನ್ ತಗುಲಿ ಶಾಕ್ ಹೊಡೆದಿದೆ.
ಪರಿಣಾಮ, ಬಾಲಕನ ಕೈ-ಕಾಲು, ದೇಹವೆಲ್ಲ ಸುಟ್ಟು ಕರಕಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕನಿಗೆ ಇದುವರೆಗೆ 20 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಾಲಕನ ಹೆಸರು ಸಿದ್ದಾರ್ಥ ಮಂಜುನಾಥ ಬಳ್ಳಾರಿ.
ಕೇಶ್ವಾಪುರದಲ್ಲಿ ಸಿದ್ದಾರ್ಥ ಕುಟುಂಬ ವಾಸವಾಗಿದೆ. ಎಲ್ಲ ಮಕ್ಕಳಂತೆ ಈತನು ಸಹ ಆಟವಾಡಿಕೊಂಡು ಓದಿಕೊಂಡು ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ದ. ಆದರೆ ಅಂದು ತಗುಲಿದ ವಿದ್ಯುತ್ ಶಾಕ್ನಿಂದ ಸಿದ್ದಾರ್ಥ ಈಗ ಅಂಗವಿಕಲನಾಗಿ ಮನೆಯಲ್ಲಿ ಕುಳಿತಿದ್ದಾನೆ.

ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡದಿಂದ ಬಾಲಕನ ಬದುಕು ಸುಟ್ಟು ಹೋಗಿದೆ. ಮತ್ಯಾವ ಮಕ್ಕಳಿಗೂ ಇಂತಹ ದುಸ್ಥಿತಿ ಬರಬಾರದೆಂದು ಬಾಲಕನ ತಂದೆ ಮಂಜುನಾಥ ನಿರಂತರವಾಗಿ ನಿಯಮಬಾಹಿರವಾಗಿ ನಿರ್ಮಾಣವಾದ ಕಟ್ಟಡ ತೆರವಿಗೆ ಹೋರಾಟ ನಡೆಸಿದ್ದಾರೆ. ಹೋರಾಟದ ಫಲವಾಗಿ ಮಹಾನಗರ ಪಾಲಿಕೆಯವರು ಸರ್ವೆ ನಡೆಸಿದ್ದಾರೆ.
ಈ ವೇಳೆ ಕಟ್ಟಡ ಪರವಾನಗಿಗೆ ವಿರುದ್ಧವಾಗಿ ನಿರ್ಮಾಣವಾಗಿರುವುದು ಬೆಳಕಿಗೆ ಬಂದಿದೆ. ಪಾರ್ಕಿಂಗ್ ಜಾಗ ಮತ್ತು ಸೆಟ್ ಬ್ಯಾಕ್ ಬಿಡದೆ ನಿರ್ಮಾಣ ಮಾಡಿದ ಪರಿಣಾಮ ವಿದ್ಯುತ್ ಲೈನ್‌ಗೆ ಅಂಟಿಕೊಂಡೆ ಕಟ್ಟಡ ನಿರ್ಮಾಣವಾಗಿದೆ. ಹೆಚ್ಚುವರಿಯಾಗಿ ನಿರ್ಮಿಸಿದ ಕಟ್ಟಡದ ಭಾಗವನ್ನ ತೆರವಿಗೆ ಆದೇಶಿಸಿ ಹಲವಾರು ತಿಂಗಳು ಕಳೆದರು, ಇಲ್ಲಸಲ್ಲದ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ.