ಹುಬ್ಬಳ್ಳಿ: ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳು ಎಂದರೇ ಸಾಕು ನಮ್ಮ ರೈತ ಬಾಂಧವರಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಜಮೀನಿನ ಕೆಲಸವೆಲ್ಲ ಮುಗಿಸಿಕೊಂಡು ಮನೆಯಲ್ಲಿರುವ ಅನ್ನದಾತನಿಗೆ ಜಾತ್ರೆಗಳು ಬಂದ್ರೇ ಸಾಕು ಎಲ್ಲಿಲ್ಲದ ಹಬ್ಬ. ಉತ್ತರ ಕರ್ನಾಟಕ ಭಾಗದಲ್ಲಿ ರೈತ ಸಮುದಾಯ ಜಾತ್ರೆಗಳನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಾರೆ.
ಮುಂಗಾರು ಪೂರ್ಣಗೊಂಡು ಜಮೀನಿನ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ರೈತ ಎತ್ತುಗಳೊಂದಿಗೆ ಜಾತ್ರೆಯ ಮೂಲಕ ಮನರಂಜನೆ ಮಾಡುವುದು ನಿಜಕ್ಕೂ ವಿಶೇಷವಾಗಿದೆ. ಮಕರ ಸಂಕ್ರಾಂತಿ ಹಬ್ಬದಿಂದ ಪ್ರಾರಂಭವಾಗುವ ಜಾತ್ರೆಗಳು ರೈತನ ವೃತ್ತಿ ಬದುಕಿನ ಒತ್ತಡಗಳನ್ನು ನಿವಾರಿಸುವ ಒಂದು ಮಾರ್ಗವಾಗಿದ್ದು, ರೈತ ತನ್ನ ಚಕ್ಕಡಿ ಹಾಗೂ ಎತ್ತುಗಳನ್ನು ಅಲಂಕರಿಸಿಕೊಂಡು ಮೆರವಣಿಗೆ ರೀತಿಯಲ್ಲಿ ಜಾತ್ರೆಗಳಿಗೆ ತೆರಳುವುದು ನೋಡುವರ ಕಣ್ಮನ ಸೆಳೆಯುತ್ತದೆ. ಎತ್ತುಗಳಿಗೆ ಹುರಗೆಜ್ಜೆ ಸರ,ಕೊಂಬೆಣಸು,ಕಾಲ್ಗೆಜ್ಜೆ ಹಾಗೂ ಚಕ್ಕಡಿಗೆ ಬಲೂನ್ ಮೂಲಕ ಅಲಂಕಾರ ಮಾಡಿಕೊಂಡು ಜಾತ್ರೆಗೆ ಹೋಗುತ್ತಾರೆ ಅಲ್ಲದೇ ಹೋಗುವ ಸಂದರ್ಭದಲ್ಲಿ ದೇವರ ಕುರಿತು ಜೈ ಘೋಷಣೆ ಕೂಗುವುದು ಹಳ್ಳಿಯ ಸೊಗಡಿನ ಸಂಪ್ರದಾಯ.
ಉಳವಿ ಚನ್ನಬಸವೇಶ್ವರ ಜಾತ್ರೆಗೆ ಗೋಪನಕೊಪ್ಪ ರೈತರ ಎತ್ತು ಹಾಗೂ ಚಕ್ಕಡಿಗಳು ಅಲಂಕೃತಗೊಂಡು ಜಾತ್ರೆ ಹೋಗುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಹಬ್ಬ ಹರಿದಿನಗಳ ಆಚರಣೆ ಆಧುನಿಕರಣದ ಹೆಸರಲ್ಲಿ ಕ್ಷೀಣಿಸುತ್ತಿದೆ.ಆದರೇ ಹುಬ್ಬಳ್ಳಿಯ ಗೋಪನಕೊಪ್ಪದ ರೈತರಲ್ಲಿ ವರ್ಷದಿಂದ ವರ್ಷಕ್ಕೆ ಜಾತ್ರೆಯ ಸಂಭ್ರಮ ಮಾತ್ರ ಚಿಗುರೊಡೆದಿದೆ.